ಮದ್ದೂರು : ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ತಾಲ್ಲೂಕಿಗೆ ಹೆಚ್ಚುವರಿ 350 ಕೋಟಿ ರೂ.ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ೩ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಅಧಿಕಾರ ನಡೆಸಿದವರು ಕ್ಷೇತ್ರದಾದ್ಯಂತ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸದ ಹಿನ್ನೆಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ನಾನು ಅಧಿಕಾರಕ್ಕೆ ಬಂದ ಮೇಲೆ ಅಂತಹವುಗಳ ಪಟ್ಟಿಯನ್ನು ತಯಾರಿಸಿ ಅಭಿವೃದ್ಧಿಗೆ ವೇಗ ಕಲ್ಪಿಸಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಇಲಾಖೆಗಳ ಸಚಿವರುಗಳು ೧,೩೫೦ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ವಿವರಿಸಿದರು.
ಬೆಸಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪಣ್ಣೆದೊಡ್ಡಿ ಗ್ರಾಮದ ರಸ್ತೆ, ಚರಂಡಿ ಇನ್ನಿತರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಗ್ರಾಮವೊಂದಕ್ಕೆ ೩ ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ದೊರೆತಿದೆ. ನಾಲೆಗಳ ಆಧುನೀಕರಣ, ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಇನ್ನಿತರ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರೈಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಿ ಮಾದರಿ ಗ್ರಾಮವನ್ನಾಗಿಸಲು ಶ್ರಮಿಸಲಾಗುವುದು ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ಶಬೀನಾತಾಜ್, ಸದಸ್ಯರಾದ ಮುರಳಿ, ಶೋಭ, ಮೂರ್ತಿ, ಮಂಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರ್ ರಾಜೀವ್, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ಬೆಸಗರಹಳ್ಳಿ ಗೋಪಿ, ಜಾವಿದ್, ಚಿಕ್ಕತಿಮ್ಮೇಗೌಡ, ರಾಧಾಕೃಷ್ಣ, ಪ್ರಕಾಶ್, ಗೋವಿಂದು, ಪಣ್ಣೆದೊಡ್ಡಿ ಸುಧಾಕರ್, ಧನಂಜಯ ಇತರರು ಹಾಜರಿದ್ದರು.





