ಮಂಡ್ಯ : ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಮಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಅಪಘಾತದಲ್ಲಿ ಕಾರು ಚಾಲಕನಾದ ಬೆಂಗಳೂರಿನ ರಾಜರಾಜೇಶ್ವರನಗರದ ಧನರಾಜ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಬಸ್ಸಿನಲ್ಲಿದ್ದ 16 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಘಟನೆ ವಿವರ…
ಚನ್ನಪಟ್ಟಣದ ಚಾಮುಂಡೇಶ್ವರಿ ದೇವಾಲಯದಿಂದ ಮದ್ದೂರಿಗೆ ಬರ್ತಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಮಾಚಹಳ್ಳಿ ಸಮೀಪಕ್ಕೆ ಬರುತ್ತಿದ್ದಂತೆ ಮದ್ದೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ.
ಇದನ್ನು ಓದಿ: ಅಪಘಾತ : ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿ
ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆ ಹಾಗೂ ಮದ್ದೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ.
ಸ್ಥಳಕ್ಕೆ ಕೆಸ್ತೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ ಈ ಸಂಬಂಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪರದಾಡಿದ ಗಾಯಾಳುಗಳು ; ಸ್ಥಳೀಯರ ಪ್ರತಿಭಟನೆ
ಅಪಘಾತ ಸಂಭವಿಸಿ ಒಂದು ಗಂಟೆಯಾದರೂ ಸ್ಥಳಕ್ಕೆ ಅಂಬ್ಯುಲೆನ್ಸ್ ಬರದ ಕಾರಣ ಗಾಯಾಳುಗಳು ಪರದಾಡಬೇಕಾಯಿತು ಎಂದು ಸ್ಥಳೀಯರು ದೂರಿದ್ದಾರೆ. ನಾವು ಸಮಯಕ್ಕೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು ಆಂಬ್ಯುಲೆನ್ಸ್ ಬರಲಿಲ್ಲ, ಪರಿಣಾಮ ದಾರಿಯಲ್ಲಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದೆವು. ನಂತರ ಒಂದು ಗಂಟೆಯ ಬಳಿಕ ಆಂಬ್ಯುಲೆನ್ಸ್ ಆಗಮಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.





