Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಾಹಿತ್ಯ ಸಮ್ಮೇಳನ; ಶಾಲಾ ಮಕ್ಕಳ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಗೆ ಡಿಸಿ ಡಾ. ಕುಮಾರ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ವಿಶೇಷವಾಗಿ ಮಂಡ್ಯ ಜಿಲ್ಲಾ ಸಾಹಿತ್ಯ ಇತಿಹಾಸ ವೈಶಿಷ್ಟ್ಯಗಳ ಕುರಿತು ಹಮ್ಮಿಕೊಳ್ಳಲಾಗಿರುವ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು  ಜಿಲ್ಲಾಧಿಕಾರಿ ಡಾ ಕುಮಾರ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯಲ್ಲಿ ಡಿಸೆಂಬರ್ 20,21,22 ರಂದು 3 ದಿನಗಳ ಕಾಲ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಸಮ್ಮೇಳನದ ಅಂಗವಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಜೊತೆಗೆ ಕನ್ನಡ ನಾಡು ನುಡಿಯ ಬಗ್ಗೆ ಎಷ್ಟು ಜ್ಞಾನವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯಲು ರಸ ಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪಠ್ಯ ವಿಷಯದ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಮಂಡ್ಯದಲ್ಲಿ ನಡೆಯುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ದಾಖಲೆಯಾಗಬೇಕು. ಜಿಲ್ಲೆಯಲ್ಲಿ 522 ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಯಿಂದ ಸುಮಾರು 68,865 ಮಕ್ಕಳಿದ್ದು ಎಲ್ಲಾ ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಪ್ರಶ್ನೆ ಪತ್ರಿಕೆಯಲ್ಲಿ 87 ಪ್ರಶ್ನೆಗಳಿದ್ದು, ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳ ಕುಟುಂಬಗಳಿಗೂ ಆಹ್ವಾನವನ್ನು ನೀಡಲಾಗಿದೆ. ಮಕ್ಕಳಿಗೆ ನಾಡು ನುಡಿಯ ಬಗ್ಗೆ ಅರಿವು ಮತ್ತು ಜಾಗೃತಿ ನೀಡುವುದರ ಜೊತೆಗೆ ಜಿಲ್ಲೆಯ ಸುಮಾರು 68,000 ಕುಟುಂಬಗಳಿಗೆ ಸಮ್ಮೇಳನದ ಆಹ್ವಾನವು ತಲುಪುತ್ತದೆ ಎಂದರು.

ಪರೀಕ್ಷೆ ಮೊದಲು ಶಾಲಾ ಹಂತದಲ್ಲಿ ಜಿಲ್ಲೆಯಾದ್ಯಂತ ಏಕಕಾಲಕ್ಕೆ ನಡೆಯಲಿದ್ದು, ನಂತರ ಪ್ರತಿ ಶಾಲೆಯಿಂದ ವಿಜೇತ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ತಾಲ್ಲೂಕು ಹಂತದಲ್ಲಿ ಸ್ಪರ್ಧೆ ನಡೆಸಲಾಗುವುದು. ತಾಲೂಕು ಹಂತದಲ್ಲಿ ಆಯ್ಕೆಗೊಂಡ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ. ತಾಲ್ಲೂಕು ಹಂತದಲ್ಲಿ ಪ್ರತಿ ತಾಲ್ಲೂಕಿನಿಂದ ಮೂರು ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಆಯ್ಕೆಗೊಂಡ ಮೂರು ಮಕ್ಕಳಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಡಿಸೆಂಬರ್ 10 ರಂದು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಪ್ರೌಢಶಾಲಾ ಮಾದರಿಯಲ್ಲೇ ಜಿಲ್ಲೆಯಾದ್ಯಂತ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಜಿಲ್ಲೆಯಲ್ಲಿ ಸುಮಾರು 157 ಪದವಿ ಪೂರ್ವ ಕಾಲೇಜಿಗಳಿದ್ದು ಅದರಲ್ಲಿ ಸುಮಾರು 28,000 ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಕಾಲೇಜು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಆಯ್ಕೆಗೊಂಡ ವಿಜೇತ ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ನಾವು ಕನ್ನಡ ಪ್ರಜ್ಞೆ, ಕನ್ನಡ ಪ್ರೇಮವನ್ನು ಜಾಗೃತಿಗೊಳಿಸಬೇಕು. ಕನ್ನಡ ಭಾಷೆಯ ಮೂಲವನ್ನು ತಿಳಿದು ಭಾಷೆಯನ್ನು ಹೇಗೆ ಬೆಳೆಸಬಹುದು ಎಂಬುದರ ಬಗ್ಗೆ ನಮ್ಮ ಚಿತ್ತ ಹರಿಸಬೇಕು ಎಂದರು.

ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಳಿದುಕೊಳ್ಳಬಹುದು. ಕನ್ನಡ ನೆಲ,ಜಲ, ಹೆಣ್ಣು ಭ್ರೂಣ ಹತ್ಯೆಗಳು ಹಾಗೂ ಮುಂತಾದ ಸಮಸ್ಯೆ ಬಗ್ಗೆ ತಜ್ಞರ ವಿಚಾರಗೋಷ್ಠಿ ನಡೆಸುವುದು ಹಾಗೂ ಅದೆಲ್ಲದರ ಬಗ್ಗೆ ಅರಿವು ಮೂಡಿಸುವುದು ಸಾಹಿತ್ಯ ಸಮ್ಮೇಳನದ ಆಶಯವಾಗಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಸಾಂಸ್ಕೃತಿಕ ಕಲಾತಂಡಗಳಿಂದ ಕಲೆ ಪ್ರದರ್ಶನ ಇರುವುದರಿಂದ ಪ್ರತಿಯೊಬ್ಬರೂ ಪೋಷಕರೊಡನೆ ಬಂದು ಕಲೆಗಳ ಪ್ರಕಾರವನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತ್ ಅನ್ನು ಸ್ಥಾಪಿಸಿದವರಾಗಿದ್ದು, ಅವರುಗಳನ್ನು ಇಂದು ಸ್ಮರಿಸಬೇಕು. ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿದ್ದು, ಕನ್ನಡ ಭಾಷೆಯ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳಲು ನಿಮಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮೆಲ್ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ಗ್ಲಾಡಿಸ್ ಕಾಸ್ಟಲಿನೋ, ಮುಖ್ಯೋಪಾಧ್ಯಾಯರು ಸಿಸ್ಟರ್ ಮೇರಿ ಪೌಲಿನೆ, ಬಿಇಒ ಮಹದೇವು, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹಾಗೂ ಪ್ರಶ್ನೆ ಪತ್ರಿಕೆ ತಯಾರಕ ಮಹೇಶ್, ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಪದಾಧಿಕಾರಿಗಳು ಡಾ ಹುಸ್ಕೂರು ಕೃಷ್ಣೆಗೌಡ, ಚಂದ್ರಲಿಂಗು, ಈವೆಂಟ್ಸ್ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ, ಪ್ರಚಾರ ಸಮಿತಿಯ ಸದಸ್ಯರುಗಳಾದ ಕಬ್ಬನಹಳ್ಳಿ ಶಂಭು, ಎಂ ಮಂಚಶೆಟ್ಟಿ ಅವರು ಉಪಸ್ಥಿತರಿದ್ದರು.

Tags: