ಮಂಡ್ಯ: ರಾಜ್ಯ ಸರ್ಕಾರದ ಯೋಜನೆಯಾದ ಮೇಕೆದಾಟು ಯೋಜನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ಸೋಮವಾರ ಅವರು ಕೆಆರ್‌ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಿ ಮಾತನಾಡಿ, ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಈ ಅಣೆಕಟ್ಟೆಯಿಂದ 65 ಟಿಎಂಸಿ ನೀರು ಸಂಗ್ರಹ ಮಾಡಬಹುದಾಗಿದೆ. ಜತೆಗೆ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಬೆಂಗಳೂರಿಗೆ ನೀರು ಒದಗಿಸಲು ಸಹ ಸಾಧ್ಯವಾಗುತ್ತದೆ. ಮಳೆ ಕಡಿಮೆಯಾದ ಸಂಕಷ್ಟದ ವರ್ಷದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗಲಿದೆ ಎಂದರು.
ರಾಜ್ಯದ ವಿಪಕ್ಷ ನಾಯಕರುಗಳು ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ನಯಾಪೈಸಿ ಬಂದಿಲ್ಲ. ಬಿಜೆಪಿ-ಜೆಡಿಎಸ್ ಸಂಸದರೂ ಈ ಬಗ್ಗೆ ಯಾವತ್ತು ಧ್ವನಿಯೆತ್ತಿಲ್ಲ, ಬರಿ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಜನರನ್ನು ದಿಕ್ಕುತಪ್ಪಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.





