Mysore
23
overcast clouds
Light
Dark

ತಂಬಾಕು ಮುಕ್ತ ಭಾರತವಾಗಲಿ: ಹಿರಿಯ ನ್ಯಾಯಾಧೀಶ ಆನಂದ ಎಂ

ಮಂಡ್ಯ: ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ  ದೇಶವನ್ನು ತಂಬಾಕು ಮುಕ್ತ ಗೊಳಿಸೋಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆನಂದ ಎಂ  ತಿಳಿಸಿದರು.

ಅವರು ಇಂದು ಮಂಡ್ಯ ಜಿಲ್ಲಾ ಆಸ್ಪತ್ರೆ 2ನೇ ಮಹಡಿ ಇ ಎನ್ ಟಿ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳೇ ನಾಳೆ ದೇಶದ ಪ್ರಜೆಗಳಾಗಿ ಅಭಿವೃದ್ಧಿಗೆ ಕೈ ಜೋಡಿಸುತ್ತಾರೆ. ಮಕ್ಕಳು ಉತ್ತಮ ಪ್ರಜೆಗಳೊಂದಿಗೆ ಆರೋಗ್ಯಯುತ ಪ್ರಜೆಗಳಾಗಬೇಕು. ತಂಬಾಕು ದೇಹದಲ್ಲಿ ಶ್ವಾಸಕೋಶ ಸೇರಿದಂತೆ ಬಹಳಷ್ಟು ಅಂಗಗಳಿಗೆ ತೊಂದರೆ ಉಂಟುಮಾಡುತ್ತದೆ ಎಂಬ ವಿಷಯವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮನದಟ್ಟು ಮಾಡಬೇಕು. ಈ ಕೆಲಸದಲ್ಲಿ ವೈದ್ಯರು ಹಾಗೂ ಶಿಕ್ಷಕರ ಕಾರ್ಯ ಮಹತ್ವದಾಗಿದ್ದು, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ತಂಬಾಕು ಮುಕ್ತಗೊಳಿಸಲು ಕೈಜೋಡಿಸಬೇಕು. ಈ ಮೂಲಕ ತಂಬಾಕು ಮುಕ್ತ ಭಾರತವಾಗಲಿ ಎಂದರು.

ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯವಾದ ತಂಬಾಕು ಉದ್ಯಮದ ಹಸ್ತಕ್ಷೇಪ ದಿಂದ ಮಕ್ಕಳನ್ನು ರಕ್ಷಿಸುವುದು ಎಂಬ ವಾಕ್ಯವನ್ನು ಹೇಳಲಾಗಿದೆ ಕಾರಣ ತಂಬಾಕಿಗೆ ಚಿಕ್ಕ ಮಕ್ಕಳೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ, ತಂಬಾಕಿನಿಂದ ಮಕ್ಕಳನ್ನು ರಕ್ಷಿಸಬೇಕು ಎಂಬುದು ಘೋಷ ವಾಕ್ಯದ ಅರ್ಥ ಎಂದು ವಿವರಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಲೊಕೇಶ್ ಟಿ ಮಾತನಾಡಿ,  ತಂಬಾಕು ಎಂಬುವುದು ಮನುಷ್ಯನ ಜೀವನವನ್ನೇ ಹಾಳು ಮಾಡುವ ಮಾರಕವಾದ ವಸ್ತು. ಇದರಿಂದ ಪ್ರತಿಯೊಬ್ಬರು ಜಾಗರೂಕತೆಯಿಂದ ಇರಿ ತಂಬಾಕು ಎಂಬ ಚಟಕ್ಕೆ ಯಾರು ಕೂಡ ದಾಸರಾಗಬೇಡಿ ಎಂದು ಸಲಹೆ ನೀಡಿದರು.

ಜೈಲಿನಲ್ಲಿ ಇರುವ ಕೈದಿಗಳಿಗೆ ತಂಬಾಕು ಸೇವನೆಯಿಂದ ದೂರವಿಡಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರಾಗೃಹ ಇಂದು ತಂಬಾಕು ಮುಕ್ತ ವಲಯವಾಗಿದೆ ಎಂದರು.

ತಂಬಾಕು ಸೇವನೆಯಿಂದ ಹೊರ ಬರುವುದಕ್ಕೆಂದೆ ಕೈದಿಗಳಿಗೆ ಚ್ವಿಂಗಮ್ (chewing gum) ಕೊಟ್ಟು ಅಭ್ಯಾಸ ಮಾಡಿಸಿ ತಂಬಾಕು ಸೇವನೆ ನಿಲ್ಲಿಸಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಹೂಗರ್  ಮಾತನಾಡಿ, ತಂಬಾಕನ್ನು ಮೊದಲಿಗೆ ಯಾರು ಕೂಡ ತಮ್ಮ ಸ್ವಂತ ಹಣದಿಂದ ಸೇವಿಸುವದಿಲ್ಲ ಯಾರೋ ಕೊಟ್ಟಂತಹ ತಂಬಾಕನ್ನು ಸೇವಿಸಿರುವವರೇ ಹೆಚ್ಚು. ತಂಬಾಕು ಸೇವನೆ ಸಹವಾಸದಿಂದ ಬರುತ್ತದೆ. ತಂಬಾಕು ಸೇವನೆ ಮಾಡುವವರ ಸಹವಾಸ ಮಾಡಿ ಬಹಳಷ್ಟು ಜನ ತಂಬಾಕು ಎಂಬ ಚಟಕ್ಕೆ ದಾಸರಾಗಿ ಹೋಗಿದ್ದಾರೆ ಎಂದರು.

ತಂಬಾಕಿನಿಂದ ಕೂದಲು ಮತ್ತೆ ಉಗುರು ಗಳಿಗೆ ಹಾನಿ ಆಗುತ್ತಿರಲಿಲ್ಲ ಆದರೆ ಇತ್ತೀಚೆಗೆ ಬಂದ ವರದಿಯ ಪ್ರಕಾರ ತಂಬಾಕು ಎನ್ನುವುದು ಇಡೀ ದೇಹವನ್ನೆ ಆವರಿಸಿಕೊಳ್ಳುತ್ತಿದೆ ಎಲ್ಲರೂ ತಮ್ಮ ಮನೆಯಲ್ಲಿರುವವರು ತಂಬಾಕು ಸೇವನೆ ಮಾಡದಂತೆ ನೋಡಿಕೊಳ್ಳಿ, ಸೇವನೆ ಮಾಡುತ್ತಿರುವವರಿಗೂ ಕೂಡ ತಿಳಿಸಿ ಬುದ್ದಿ ಹೇಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ನಮ್ಮ ದೇಶವನ್ನು ತಂಬಾಕು ಮುಕ್ತ ಮಾಡುತ್ತೇವೆ ಎಂದು ಎಲ್ಲರಿಗೂ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಮಂಡ್ಯ ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ನರಸಿಂಹಸ್ವಾಮಿ ಪಿ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು ಶಿವಕುಮಾರ್ ಜಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ.ಗಾಯಿತ್ರಿ, ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲರು ಡಾ.ಮಮತ ಹೆಚ್ ಎಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಬೆಟ್ಟಸ್ವಾಮಿ ಜಿ.ಎಸ್, ಐ. ಎಂ. ಎ ಅಧ್ಯಕ್ಷ ಡಾ.ಮರಿಗೌಡ, ಮಿಮ್ಸ್ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಡಾ.ಹರೀಶ್ ಬಿ.ಆರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: