Mysore
23
clear sky

Social Media

ಗುರುವಾರ, 22 ಜನವರಿ 2026
Light
Dark

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ

ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ ಹಾಗೂ ದಾಖಲೆ ತಿದ್ದಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯೇ ನೇರ ಹೊಣೆಗಾರರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಕಿಂಗ್‌ಪಿನ್‌ಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಆದ್ದರಿಂದ ಹಾಲಿ ನ್ಯಾಯಾಽಶರು ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಶಾಸಕ ಸುರೇಶ್‌ಗೌಡ ಒತ್ತಾಯಿಸಿದರು.

ಸಚಿವ ಎನ್.ಚಲುವರಾಯಸ್ವಾಮಿ ಅವರ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಅದರಂತೆ ಈ ಪ್ರಕರಣದಲ್ಲೂ ಅವರೇ ನೇರ ಹೊಣೆಗಾರರಾಗಿದ್ದಾರೆ. ಭೂಗಳ್ಳತನದ ಬಗ್ಗೆ ನಾನು ಈ ಹಿಂದೆಯೂ ಧ್ವನಿ ಎತ್ತಿದ್ದೆ. ಆದರೆ, ಇದೀಗ ಲೋಕಾಯುಕ್ತ ದಾಳಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನನ್ನ ತಪ್ಪಿದ್ದರೂ ಕ್ರಮ ಕೈಗೊಳ್ಳಲಿ
ಪ್ರಕರಣದಲ್ಲಿ ನಿಜವಾದ ಕಿಂಗ್‌ಪಿನ್‌ಗಳು ಯಾರೂ ಸಿಕ್ಕಿಲ್ಲ. ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸುತ್ತಿರುವುದು ಹೊಸದಲ್ಲ. 1990 ರಿಂದಲೂ ನಿರಂತರವಾಗಿ ನಡೆಯುತ್ತಿದೆ. ನಾಗಮಂಗಲ ಕ್ಷೇತ್ರದಲ್ಲಿ 4500ಕ್ಕೂ ಹೆಚ್ಚು ಹೆಕ್ಟೇರ್ ಸರ್ಕಾರಿ ಜಮೀನು ಇದೆ. ಆದ್ದರಿಂದ ಈ ಪ್ರಕರಣ ಸಂಪೂರ್ಣವಾಗಿ ತನಿಖೆ ಆಗಬೇಕು. ನನ್ನ ಅವಽಯಲ್ಲಿ ಅಕ್ರಮ ಆಗಿದ್ದರೂ ತನಿಖೆ ನಡೆಸಬೇಕು. ನನ್ನ ತಪ್ಪಿದ್ದರೂ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗಲ್ಲ:
ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ. ಆದರೆ, ಕಂದಾಯ ಹಾಗೂ ಪೊಲೀಸ್ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಅತ್ತ ಲೋಕಾಯುಕ್ತ ಅಧಿಕಾರಿಗಳು ತುಂಬಾ ಆಳಕ್ಕೆ ಹೋಗಿ ತನಿಖೆ ಮಾಡಿದರೂ ಭೂಗಳ್ಳರು ಸಿಗಲ್ಲ. ಆದ್ದರಿಂದ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ನಕಲಿ ದಾಖಲೆ ಸೃಷ್ಟಿ, ಕಡತ ತಿದ್ದುಪಡಿ ಸೇರಿದಂತೆ ಹಲವಾರು ಅಕ್ರಮವಾಗಿದೆ. ವರ್ಗಾವಣೆಯಾಗಿರುವ ಅಧಿಕಾರಿಗಳನ್ನು ಇಟ್ಟುಕೊಂಡು ಈ ಕೆಲಸ ಮಾಡಲಾಗುತ್ತಿದೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿದರೆ ಮಾತ್ರ ಪ್ರಕರಣಕ್ಕೆ ನ್ಯಾಯ ಸಿಗಲಿದೆ. ಇಲ್ಲದಿದ್ದರೆ ಪ್ರಕರಣ ಮುಚ್ಚಿ ಹೋಗುವ ಸಾಧ್ಯತೆ ಇದೆ. ಕಾರಣ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕ್ಷೇತ್ರದಲ್ಲಿ ಒಂದು ಕಡ್ಡಿ ಅಲ್ಲಾಡುತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಚನ್ನಪ್ಪ, ಸಂತೋಷ್, ಅಪ್ಪಾಜಿ, ನಾಗೇಶ್, ರಾಜೇಗೌಡ, ಶ್ರೀನಿವಾಸ್ ಹಾಜರಿದ್ದರು.

Tags:
error: Content is protected !!