ಕೆ.ಆರ್.ಪೇಟೆ: ಗಾಂಜಾ ಮತ್ತು ಮಧ್ಯ ಸೇವಿಸಿದ ಅಮಲಿನಲ್ಲಿ ಶಾಲಾ ಬಸ್ ತಡೆದು, ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಕಿರಿಕ್ ಮಾಡಿದ್ದ ಇಬ್ಬರು ಪುಂಡ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯ ಖಾಸಗಿ ಶಾಲೆಯ ಬಸ್ ತಡೆದು ಕಿರಿಕ್ ಮಾಡಿದ್ದ ವಡ್ಡರಹಳ್ಳಿ ಗ್ರಾಮದ ಗಿರೀಶ(21) ಮತ್ತು ಕಿರಣ್(20) ಬಂಧಿತರು.
ಕಿಕ್ಕೇರಿಯ ಖಾಸಗಿ ಶಾಲೆಯಿಂದ ಮಕ್ಕಳನ್ನು ಎಂದಿನಂತೆ ಅವರವರ ಗ್ರಾಮಗಳಿಗೆ ಸುರಕ್ಷಿತವಾಗಿ ಬಿಡಲು ಹೋಗುತ್ತಿದ್ದ ಖಾಸಗಿ ಶಾಲೆಯ ಬಸ್ ಅನ್ನು ಬಸವನಹಳ್ಳಿ ಮಾರ್ಗವಾಗಿ ವಡ್ಡರಹಳ್ಳಿಗೆ ಹೋಗುತ್ತಿರುವಾಗ ರಸ್ತೆ ಮಾರ್ಗ ಮದ್ಯದಲ್ಲಿ ಗಾಂಜಾ ಮತ್ತು ಮಧ್ಯ ಸೇವಿಸಿದ್ದ ಕಿರಣ ಮತ್ತು ಗಿರೀಶ ನಶೆಯ ಅಮಲಿನಲ್ಲಿ ಶಾಲಾ ಬಸ್ ಅನ್ನು ತಡೆದು ನಿಲ್ಲಿಸಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಬಸ್ ಇಂದ ಕೆಳಗೆ ಇಳಿಸುವಂತೆ ನಮ್ಮ ಜೊತೆ ಕಳಿಸುವಂತೆ ಧಮ್ಕಿ ಹಾಕಿದ್ದರು.
ಜೊತೆಗೆ ಖಾಸಗಿ ಶಾಲಾ ಬಸ್ ಚಾಲಕನಿಗೆ ಅವಾಜ್ ಹಾಕಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ವಿಡಿಯೋ ಸಮೇತ ಪುಂಡರ ವಿರುದ್ದ ಖಾಸಗಿ ಆಡಳಿತ ಮಂಡಳಿ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರನ್ನು ದಾಖಲಿಸಿಕೊಂಡು ಆರೋಪಿಗಳಾಗಿ ಹುಡುಕಾಟ ನಡೆಸಿದ ಪೊಲೀಸರು ಪುಂಡರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





