Mysore
22
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ (ಸುಮಾರು 1 ಲಕ್ಷ ರೂ.) ಶಾಲೆಯ ಎಲ್ಲಾ 65 ವಿದ್ಯಾರ್ಥಿಗಳಿಗೂ ಎರಡು ದಿನಗಳ ಶೈಕ್ಷಣಿಕ ಪ್ರವಾಸ ಭಾಗ್ಯ ಕಲ್ಪಿಸುವ ಮೂಲಕ ಮಾದರಿ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ.

ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಕ್ಕಳ ದಾಖಲಾತಿ ಹೆಚ್ಚಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಪೋಷಕರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಜಾಗೃತಿ ಮೂಡಿಸಿ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಶ್ರಮಸಿದ್ದ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದು ಸ್ವತಃ ಇಂಗ್ಲಿಷ್ ಶಿಕ್ಷಕರಾಗಿ ಇಂಗ್ಲಿಷನ್ನು ಮಕ್ಕಳಿಗೆ ಕಲಿಸಿಕೊಡುವ ಮೂಲಕ ‘ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ’ ಎನ್ನುವ ಮಾತನ್ನು ದೂರವಾಗಿಸಿದ್ದಾರೆ.

ಇದನ್ನು ಓದಿ: ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಮುಂದಿರುವುದನ್ನು ಮನಗಂಡು ಇತರೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಕರೆತಂದು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಇದಕ್ಕೆ ಶಾಲೆಯ ಸಹ ಶಿಕ್ಷಕರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಹೆಚ್ಚಿಸಲು ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ಅಪಾರವಾಗಿ ಶ್ರಮಿಸುತ್ತಿದ್ದಾರೆ.

ತೆಂಡೇಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ. ಪ್ರಸ್ತುತ ೬೫ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಿ.ಎಸ್.ರಾಜು ಅವರು ಶಾಲೆಗೆ ಕಳೆದ ೪ವರ್ಷಗಳ ಹಿಂದೆ ವರ್ಗಾವಣೆಯಾಗಿ ಬಂದ ನಂತರ ಪ್ರತಿ ವರ್ಷವೂ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಪೋಷಕರ ಸಹಕಾರ, ಎಸ್.ಡಿ.ಎಂ.ಸಿ ಪದಾಧಿಕಾರಿಗಳ ಸಹಕಾರ, ಹಳೆಯ ವಿದ್ಯಾರ್ಥಿಗಳ ಸಹಕಾರ, ದಾನಿಗಳ ಸಹಕಾರದಿಂದ ಶ್ರಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಶೈಕ್ಷಣಿಕ ಪ್ರವಾಸ ಹೋಗಬೇಕೆಂದು ಯೋಜನೆ ರೂಪಿಸಿದಾಗ ಶೇ.೩೦ರಷ್ಟು ಮಕ್ಕಳು ಮಾತ್ರ ಪ್ರವಾಸ ಶುಲ್ಕ ನೀಡಲು ಮುಂದೆ ಬಂದರು. ಉಳಿದ ಶೇ.೭೦ರಷ್ಟು ಮಕ್ಕಳ ಪೋಷಕರು ಕೂಲಿ ಮಾಡಿ ಜೀವನ ನಡೆಸುವ ಕಾರಣ ಪ್ರವಾಸ ಶುಲ್ಕ ನೀಡಲು ಮುಂದೆ ಬರಲಿಲ್ಲ. ಇದನ್ನು ಮನಗಂಡ ಮುಖ್ಯ ಶಿಕ್ಷಕ ರಾಜು ಅವರು ಎಲ್ಲಾ ಮಕ್ಕಳಿಗೂ ಉಚಿತವಾಗಿ ಪ್ರವಾಸ ಭಾಗ್ಯ ಕಲ್ಪಿಸಬೇಕು ಎಂದು ತಮ್ಮ ಒಂದು ತಿಂಗಳ ವೇತನವನ್ನು ಖರ್ಚು ಮಾಡಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ, ಮಕ್ಕಳಿಗೆ ಊಟ ತಿಂಡಿ ವ್ಯವಸ್ಥೆ, ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದು ದಿನ ತಂಗಲು ಸಮುದಾಯ ಭವನದ ವ್ಯವಸ್ಥೆಯ ಎಲ್ಲಾ ಖರ್ಚುಗಳನ್ನು ತಾವೇ ಭರಿಸಿದ್ದಾರೆ.

Tags:
error: Content is protected !!