ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಗಿರಿ ಫಾಲ್ಸ್ ಉಕ್ಕಿ ಹರಿಯುತ್ತಿದೆ.
ಹೇಮಾವತಿ ಜಲಾಶಯದಿಂದ ನದಿಗೆ 30 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವ ಕಾರಣ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಗಿರಿ ಫಾಲ್ಸ್ ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಫಾಲ್ಸ್‌ನಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಫಾಲ್ಸ್‌ನ ಹತ್ತಿರಕ್ಕೆ ಹೋಗದಂತೆ ಕಣ್ಣಿಡಲಾಗಿದೆ.
ಇಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಮಗಿರಿ ಫಾಲ್ಸ್‌ಗೆ ಭೇಟಿ ನೀಡಿದ್ದು, ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಹೆಚ್ಚಿನ ಅನಾಹುತ ಆಗುವುದಕ್ಕೂ ಮುಂಚೆ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಾವತಿ ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆನಂದ್ ಮನವಿ ಮಾಡಿದ್ದಾರೆ.