ಮಂಡ್ಯ: ಜಿಲ್ಲೆಯ ಸುಪ್ರಸಿದ್ಧ ತಾಣವಾದ ಮೇಲುಕೋಟೆಯಲ್ಲಿ ನೂತನ ನಾಡ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರುಗಳು ನೆರವೇರಿಸಿದರು.
ನಾಡ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ನಮ್ಮ ಸರ್ಕಾರ ರೈತಪರ ಸರ್ಕಾರ. ಜಿಲ್ಲೆಯಲ್ಲಿ ಇರುವ ತಹಶೀಲ್ದಾರ್ ಕೋರ್ಟ್, ಎಸಿ ಕೋರ್ಟ್, ಡಿ.ಸಿ ಕೋರ್ಟ್ ನಲ್ಲಿ ಬಾಕಿ ಇರುವ ಹಳೆಯ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಬಾಕಿ ಇದ್ದ ಹತ್ತು ಸಾವಿರ ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯರ್ಥಗೊಳಿಸಲಾಗಿದೆ. ರಾಜ್ಯಾದ್ಯಂತ ಈ ಆಂದೋಲನ ಮುಂದುವರೆಯುತ್ತದೆ ಎಂದರು.