ಮಂಡ್ಯ : ಬದುಕಲ್ಲಿ ಹಣ, ಅಂತಸ್ತು ಮತ್ತು ಅಧಿಕಾರವಿದ್ದು, ಆರೋಗ್ಯವಿಲ್ಲವಾದರೆ ಬದುಕೆ ವ್ಯರ್ಥ. ಆರೋಗ್ಯವೇ ಜೀವನದ ದೊಡ್ಡ ಆಸ್ತಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಮಿಮ್ಸ್ ಬೋಧಕ ಆಸ್ಪತ್ರೆಯ ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದ್ದ ಗೃಹ ಆರೋಗ್ಯ ಯೋಜನೆಯ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆಯ ವಿಸ್ತರಣೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವನ್ನು ಕಾನೂನು, ನೀತಿ, ನಿಬಂಧನೆಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಆದರೂ ಸಹ ಸರ್ಕಾರ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಗಾಗಿ ಮನೆ-ಮನೆಗೆ ತಲುಪಿ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದೆ. ರಾಜ್ಯದ ಪ್ರತಿಯೊಬ್ಬರೂ ಗೃಹ ಅರೋಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಡವರು, ವಯಸ್ಸಾದವರಿಗೆ ಹಾಗೂ ಅನಾರೋಗ್ಯವಿದ್ದು ಆಸ್ಪತ್ರೆಗಳಿಗೆ ಭೇಟಿ ನೀಡದವರಿಗೆ ಅನುಕೂಲವಾಗಬೇಕೆಂಬುವುದೇ ಗೃಹ ಅರೋಗ್ಯ ಯೋಜನೆಯ ಉದ್ದೇಶ. ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಡವರಿಗೆ ಅನುಕೂಲವಾಗುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಎಂದು ತಿಳಿ ಹೇಳಿದರು.
ಹಿಂದಿನ ಕಾಲದದಲ್ಲಿ ಜೀವನಶೈಲಿ ಉತ್ತಮವಾಗಿತ್ತು ಹಾಗೂ ವ್ಯವಸಾಯದಲ್ಲಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ, ಪ್ರಸ್ತುತ ಸಮಾಜದಲ್ಲಿ ಜೀವನಶೈಲಿ, ಆಹಾರ ಹಾಗೂ ವ್ಯವಸಾಯ ಪದ್ಧತಿ ಎಲ್ಲವೂ ಬದಲಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದೆ. ನಮ್ಮ ಆರೋಗ್ಯ ನಮ್ಮದೇ ಹೊಣೆಯಾಗಿರುತ್ತದೆ, ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಬೇಕು ಎಂದು ಹೇಳಿದರು.
ಸರ್ಕಾರ ಜಿಲ್ಲೆಯಲ್ಲಿ ಸಮುದಾಯ, ಜಿಲ್ಲಾ, ತಾಲ್ಲೂಕು ಹಾಗೂ ತಾಯಿ-ಮಗು ಆಸ್ಪತ್ರೆಗಳನ್ನು ತೆರೆಯಲು ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಬಹಳ ಮುಖ್ಯವಾದದ್ದು ಈ ನಿಟ್ಟಿನಲ್ಲಿ ಸರ್ಕಾರವು ಕೆಲಸ ನಿರ್ವಹಿಸುತ್ತಿದೆ. ನಿರಂತರ ಪ್ರಯತ್ನದಿಂದ ಅನೇಕ ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಶಾ ಕೈಪಿಡಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ಮದ್ದೂರು ವಿಧಾನಸಭಾ ಕ್ಷೇತ್ರ ಶಾಸಕ ಕೆ.ಎಂ ಉದಯ, ಮೈಸೂರು ಕಂಪನಿ ನಿಯಮಿತ ಅಧ್ಯಕ್ಷರ ಸಿ.ಡಿ ಗಂಗಾಧರ, ಜಿಲ್ಲಾಧಿಕಾರಿ ಡಾ. ಕುಮಾರ, ಪೋಲಿಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ, ಮಿಮ್ಸ್ ಭೋದಕ ಆಸ್ಪತ್ರೆ ನಿರ್ದೇಶಕ ಡಾ. ಪಿ.ನರಸಿಂಹಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಉಪಸ್ಥಿತರಿದ್ದರು.





