Mysore
20
overcast clouds
Light
Dark

ಡಿಕೆಶಿ ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ಕೊಡುತ್ತಾರೋ ನೋಡೋಣ ಎಂದ ಎಚ್.ಡಿ ಕುಮಾರಸ್ವಾಮಿ

ಮಂಡ್ಯ: ತಮ್ಮನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಟೀಕೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು‌ ತಿರುಗೇಟು ಕೊಟ್ಟಿದ್ದು, ಮುಂದೆ ಅವರು ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ‌‌ ಎಂದು ಟಾಂಗ್ ನೀಡಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಡಿಕೆಶಿಯ ಮುಂದಿನ ಸ್ಥಿತಿಗತಿಗಳ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಂತೆ ಇದ್ದ ಅವರ ಹೇಳಿಕೆ, ಯಾರು ಮೆಂಟಲ್ ಆಸ್ಪತ್ರೆಗೆ ಹೋಗುತ್ತಾರೆ ನೋಡೋಣ ಬನ್ನಿ. ನಾವು ಮೆಂಟಲ್ ಆಸ್ಪತ್ರೆಗೆ ಹೋಗಿ ಟ್ರೀಟ್ಮೆಂಟ್ ತಗೆದುಕೊಳ್ಳಬಹುದು‌, ಇರಲಿ.. ಆದರೆ ಅವರು ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ತಾರೆ ನೋಡೋಣ ಬನ್ನಿ‌‌ ಎಂದು ಡಿ.ಕೆ.ಶಿವಕುಮಾರ್ ಗೆ ತಿರುಗೇಟು ಕೊಟ್ಟರು.

ಆ ವ್ಯಕ್ತಿಯ ಹೇಳಿಕೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇಲ್ಲ. ಪಾದಯಾತ್ರೆ ಮುಕ್ತಾಯ ಮಾಡಿದ್ದೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ನಿರಂತರವಾಗಿ ಇರುತ್ತದೆ. ಪಾದಯಾತ್ರೆ ಯಶಸ್ಸು ಸಹಿಸಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಲೂಟಿ ಮಾಡಿಕೊಂಡು ಸಾಗುತ್ತಿದೆ ಸರಕಾರ. ನಮ್ಮ ಬಗ್ಗೆ ಸಹಿಷ್ಣುತೆ ಇಲ್ಲದೆ ವ್ಯಕ್ತಿಗತ ಟೀಕೆ ಮಾಡುತ್ತಿದ್ದಾರೆ. ಜನರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ನಾವು ಪಾದಯಾತ್ರೆ ಮಾಡಿದ್ದು ಜನಜಾಗೃತಿ ಮೂಡಿಸಲಿಕ್ಕೆ. ಈ ಸರ್ಕಾರದ ಭ್ರಷ್ಟಾಚಾರವನ್ನು ತಿಳಿಸಲು ಪಾದಯಾತ್ರೆ ಮಾಡಿದ್ದೇವೆ. ಮುಂದೆ ಕಾನೂನು ರೀತಿಯ ಹೋರಾಟವನ್ನೂ ನಡೆಸುತ್ತೇವೆ. ಕರ್ನಾಟಕದ ಖಜಾನೆ ಸದಾ ತುಂಬಿರುತ್ತದೆ. ಈ ಖಜಾನೆಯನ್ನು ಈ ಸರಕಾರ ಲೂಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಈ ಸರಕಾರ ಮಾಡುತ್ತಿಲ್ಲ. ಇಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತಿಲ್ಲ, ಕುರ್ಚಿಯಲ್ಲಿ ಕೂತವರು ಅಲ್ಲಾಡುತ್ತಿದ್ದಾರೆ ಅಷ್ಟೇ..ರಾಜ್ಯದ ಅಧಿಕಾರದ ಕುರ್ಚಿ ಭದ್ರವಾಗಿಯೇ ಇರುತ್ತದೆ. ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧ ಕುರ್ಚಿ ಗಟ್ಟಿಯಾಗಿದೆ. ಕುರ್ಚಿಯಲ್ಲಿ‌ ಕೂರೋರು ಭದ್ರವಾಗಿ ಇರೋಕೆ ಆಗಲ್ಲ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.