ಪಾಂಡವಪುರ : ತಾಲ್ಲೂಕಿನ ಇಂಗಲಕುಪ್ಪೆ ಗ್ರಾಮದ ರೈತ ಜವರೇಗೌಡರ ಕಾಳೇಗೌಡ ಎಂಬವರಿಗೆ ಸೇರಿದ ಮೂರು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮುಂಜಾನೆ ೫ ಗಂಟೆಯ ಸಮಯದಲ್ಲಿ ರೈತ ಕಾಳೇಗೌಡ ಮೇಕೆಗಳನ್ನು ಮನೆಯ ಮುಂದೆ ಕಟ್ಟಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ಮೂರು ಮೇಕೆಗಳನ್ನು ಕೊಂದಿದೆ. ಮೇಕೆಗಳ ಕಿರುಚಾಟವನ್ನು ಗಮನಿಸಿ ಹೊರಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ. ಮೇಕೆಗಳ ಸಾವಿನಿಂದ ರೈತ ಕಾಳೇಗೌಡರಿಗೆ ೫೦ ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಇಂಗಲಕುಪ್ಪೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಹಸು, ಕುರಿ, ಮೇಕೆಗಳ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿವೆ. ರೈತರು ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ. ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಳ ಹಾವಳಿ ತಪ್ಪಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇಲಾಖೆಯಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಜತೆಗೆ ಚಿರತೆಯ ಸೆರೆಗೆ ಬೋನ್ ಇಡಲಾಗುವುದು ಎಂದು ಭರವಸೆ ನೀಡಿದರು.





