Mysore
23
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ದೇಶಕ್ಕೆ ಗಾಂಧಿ, ಶಾಸ್ತ್ರೀ ಕೊಡುಗೆ ಅಪಾರ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರ ಸಾಧನೆ ಹಾಗೂ ಕೊಡುಗೆ ಅಪಾರ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ  ತಿಳಿಸಿದರು.

ಬುಧುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗವಿರುವ ಕಾವೇರಿ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅನನ್ಯ ಹಾರ್ಟ್ಸ್ ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ
ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಅವರ 155 ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ದಿ|| ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಇಂದು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಇಬ್ಬರೂ ಮಹಾನ್ ವ್ಯಕ್ತಿಗಳು ಕೂಡ ಜನ್ಮ ದಿನವಾಗಿದ್ದು, ಎರಡು ಜಯಂತಿಗಳು ಕೂಡ ತುಂಬಾ ಮಹತ್ವವಾದದ್ದು. ಇವರಿಬ್ಬರ ಜೀವನದ ಆದರ್ಶಗಳು ಭಾರತ ದೇಶದ ನಾಗರಿಕರಿಗೆ ಮಾದರಿ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರೀಗಳು ಅತ್ಯಂತ ಸದೃಢ ಸ್ವತಂತ್ರ ಹೋರಾಟಗಾರರಾಗಿ, ಅಂದಿನ ಪ್ರಧಾನಿಯಾಗಿ ಕೃಷಿ ಯೋಜನೆಗಳ ಜೊತೆಗೆ ಇನ್ನೂ ಅನೇಕ ಯೋಜನೆಗಳನ್ನು ಲೋಕ ಕಲ್ಯಾಣಕ್ಕಾಗಿ ತಂದವರು.

ಈ ಹಿಂದೆ ಭಾರತ ದೇಶವನ್ನು ಸೇರಿದಂತೆ ಬ್ರಿಟಿಷರು ಅನೇಕ ದೇಶಗಳನ್ನು ಆಳುತ್ತಿದ್ದರು. ಬ್ರಿಟಿಷರ ಹಾವಳಿಯಿಂದ ಹೊರ ಬರಲು ಬಹಳಷ್ಟು ದೇಶಗಳು ಹಿಂಸಾಚಾರ ಚಳುವಳಿಗಳನ್ನು ನಡೆಸಿದಂತಹ ಇತಿಹಾಸವಿದೆ. ಪ್ರಪಂಚದಲ್ಲಿ ಅಹಿಂಸಾತ್ಮಕ ನಿಲುವನ್ನು ತಾಳುವ ಮೂಲಕ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟಿಷರನ್ನು ಓಡಿಸಿದಂತಹ ದೇಶ ನಮ್ಮ ಭಾರತವಾಗಿದೆ ಎಂದರು.

ಮಹಾತ್ಮಾ ಗಾಂಧೀಜಿಯವರು ಯಾವುದೇ ಆಸೆ, ಆಮಿಷಗಳಿಗೆ ಒಳಪಡದೆ ಅಹಿಂಸಾತ್ಮಕವಾಗಿ ಅನೇಕ ಹೋರಾಟವನ್ನು ಪ್ರಾರಂಭ ಮಾಡಿದವರು. ಹೋರಾಟ ಮಾಡುವ ಸಂದರ್ಭದಲ್ಲಿ ಬಂದಂತಹ ಅನೇಕ ಸಮಸ್ಯೆಗಳನ್ನು ಎದುರಿಸಿ ಇಡೀ ದೇಶದ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಳುವಂತೆ ಮಾಡಿದರು.

ನಮ್ಮ ದೇಶದಲ್ಲಿ ಸಂವಿಧಾನ ರಚನೆಯಾಗುವ ಮುನ್ನವೇ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಗಾಂಧೀಜಿಯವರು ದಲಿತರನ್ನು ತಮ್ಮ ಜೊತೆಯಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಸಮಾಜದಲ್ಲಿ ಸಮಾನತೆ ಮೂಡಿಸಲು ಶ್ರಮಿಸಿದರು ಎಂದು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರೀಯವರು ಅಂದು ದೇಶದಲ್ಲಿ ರೈತರನ್ನು ಹಾಗೂ ಸೈನಿಕರನ್ನು ಹುರಿದುಂಬಿಸಲು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ದೇಶದ ರೈತರಿಗೆ ಗೌರವ ಹಾಗೂ ಮನ್ನಣೆ ನೀಡಿ ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದವರು ಎಂದರು.

ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರಿಬ್ಬರ ಕೊಡುಗೆ ಅವಿಸ್ಮರಣೀಯವಾಗಿದ್ದು, ಎಲ್ಲರಿಗೂ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಶುಭಾಶಯಗಳು ಎಂದು ತಿಳಿಸಿದರು.

ಪ್ರತಿಜ್ಞಾ ವಿಧಿ ಬೋಧನೆ

ಭಾರತ ದೇಶದ ಪ್ರಜೆಗಳಾದ ನಾವು ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧಭಾವವಿಲ್ಲದೆ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ‘ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೆ ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲಾ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಗಾಂಧೀಜಿಯವರ ಅಹಿಂಸಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಅವರು ವೇದಿಕೆ ಮೇಲಿರುವ ಎಲ್ಲಾ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಇಂದು ನಡೆದ ಗಾಂಧಿ ಜಯಂತಿ ಅಂಗವಾಗಿ‌ ಗಾಂಧೀಜಿ ಅವರ ತತ್ವ ಅನುಸರಿಸುವ ರೀತಿ ಕಾಟನ್ ಬಟ್ಟೆಯ ಮೇಲೆ ಕೈ ಬರಹದಲ್ಲಿ ಬ್ಯಾನರ್ ಅಳವಡಿಸಿದ್ದು, ವಿಶೇಷವಾಗಿತ್ತು.

ಹಿಂದೂ ಧರ್ಮ ಗುರು ಹೆಚ್.ಎನ್ ಪದ್ಮನಾಭ್, ಕ್ರಿಶ್ಚಿಯನ್ ಧರ್ಮ ಗುರು ಜಯಂತ್ ಪ್ರಸಾದ್ ಇಸ್ಲಾಂ ಧರ್ಮ ಗುರು ತನ್ವೀರ್, ಜೈನ್ ಧರ್ಮಗುರು ಶಾಂತಿ ಪ್ರಸಾದ್ ಜೈನ್ ಅವರುಗಳು ಸರ್ವಧರ್ಮ ಪ್ರಾರ್ಥನೆ ನಡೆದಿಕೊಟ್ಟರು.

ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗದ ಲಿಖಿತ್ ರಾಜು ಎಸ್. ಆರ್ ,ಸುಚಿತ್ರ,ಲಕ್ಷಯ್ ಗೌಡ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ವಿಜೇತರಾದ ಸಂಗೀತ. ಎನ್ ,ರಕ್ಷಿತಾ. ಹೆಚ್.ಡಿ, ಪ್ರಜ್ವಲ್. ಪದವಿ/ ಸ್ನಾತಕೋತ್ತರ ವಿಭಾಗದ ಯುಕ್ತಿ ಎಸ್, ಪೂಜಾ ಕೆ ಹಾಗೂ ನೇತ್ರಾ ಬಿ.ಎಸ್ ಅವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಗೊರವಾಲೆ ಚಂದ್ರಶೇಖರ್ ಮತ್ತು ತಂಡದವರಾದ ಹನಿಯಂಬಾಡಿ ಶೇಖರ್, ಸರ್ವಮಂಗಳ, ನವೀನ್ ಸೇರಿದಂತೆ ಇತರರು ಗಾಂಧೀಜಿಯವರ ಕುರಿತು ಗೀತಾ ಗಾಯನವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ. ರವಿಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಮಾಜಿ‌ ಶಾಸಕ ಎಂ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ನೆಹರು ಯುವ ಕೇಂದ್ರದ ಹರ್ಷ, ಅನನ್ಯ ಹಾರ್ಟ್ಸ್ ನ ಅನುಪಮಾ  ಉಪಸ್ಥಿತರಿದ್ದರು.

Tags: