ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗಿದ್ದು, ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ 350 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ಇದಕ್ಕೆ ತಾಂತ್ರಿಕ ಅನುಮೋದನೆ ದೊರೆತಿದ್ದು, ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. ಅನುಮೋದನೆ ನಂತರ ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಶಾಸಕ ಪಿ.ರವಿಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆದಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದ ವಿ.ನಾಲೆ ವ್ಯಾಪ್ತಿಯ ಪಿಕಪ್, ಸಂಪರ್ಕ, ಶಾಖಾ ನಾಲೆಗಳ ಅಭಿವೃದ್ಧಿಗೆ ಜಲಸಂಪನ್ಮೂಲ ಇಲಾಖೆಯಿಂದ 100 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಅಲ್ಲಿಗೂ ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ರೈತರ ಬೆಳೆಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಹಣ ಬಿಡಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇದಕ್ಕೆ ಸಹಕಾರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ 200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಶೇ.80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಈ ಪೈಕಿ ಇನ್ನೂ 40 ಕೋಟಿ ರೂ. ಕಾಮಗಾರಿಗಳನ್ನು ಆರಂಭಿಸಬೇಕಿದೆ.
ಮಂಡ್ಯ ನಗರಕ್ಕೆ ಹೊಸ ರೂಪ ಕೊಡಲು ಮುಂದಾಗಿದ್ದು, ಡೆಲ್ಟಾ ಮೂಲಕ ಮಹಾನಗರ ಪಾಲಿಕೆ ಮಾದರಿಯಲ್ಲಿ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂಪಟದವರೆಗೆ ಉತ್ತಮ ರಸ್ತೆ, ಫುಟ್‌ಪಾತ್, ಸೈಕಲ್ ವೇ ನಿರ್ಮಿಸಲಾಗುವುದು. ಜೊತೆಗೆ ಬನ್ನೂರು ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದರು.
ಗೊಂದಲದಿಂದ ಹೊರಬನ್ನಿ:
ಕೈಗಾರಿಕೆ ಸ್ಥಾಪನೆಗೆ ಬಜೆಟ್‌ನಲ್ಲಿ 100 ಎಕರೆ ಜಮೀನು ನೀಡುವುದಾಗಿ ಘೋಷಿಸಲಾಗಿದೆ. ಜಿಲ್ಲೆಯ ನಾಲ್ಕು ಕಡೆ ಜಾಗ ಗುರುತಿಸಿದ್ದು, ತಜ್ಞರು ಪರಿಶೀಲನೆ ನಡೆಸಿ ಯಾವ ಜಾಗ ಆಯ್ಕೆ ಮಾಡುತ್ತಾರೋ ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ರವಿಕುಮಾರ್ ತಿಳಿಸಿದರು. ಕುಮಾರಸ್ವಾಮಿ ಅವರು ಇನ್ನೂ ಗೊಂದಲದಲ್ಲೇ ಇದ್ದಾರೆ. ಬಿಡದಿ ಬಳಿ ರೈತರ ಜಮೀನು ಕೊಡಬೇಡಿ ಎನ್ನುತ್ತಾರೆ. ಇಲ್ಲಿ ಜಮೀನು ಕೊಡಿ ಎನ್ನುತ್ತಾರೆ. ಅವರಲ್ಲಿ ಸ್ಪಷ್ಟತೆ ಇಲ್ಲ. ತಜ್ಞರು ಗುರುತಿಸುವ ಜಾಗವನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ತ್ಯಾಗರಾಜು ಉಪಸ್ಥಿತರಿದ್ದರು.





