ಕೆ.ಆರ್ ಪೇಟೆ : ಪೊಲೀಸ್ ಪೇದೆಯೊಬ್ಬರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ಐವರ ವಿರುದ್ದ ಕೆ.ಆರ್ ಪೇಟೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಸೈಯ್ಯದ್ ಮನ್ಸೂರ್ (27) ಹಲ್ಲೆಗೆ ಒಳಗಾದ ಪೊಲೀಸ್ ಕಾನ್ಸ್ ಟೇಬಲ್. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸೈಯ್ಯದ್‌ಮನ್ಸೂರ್ ಮೆದುಳಿಗೆ ತೀವ್ರ ಪೆಟ್ಟಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಡ್ಯದ ಮೂಲದ ಕೆ.ಆರ್.ಪೇಟೆಯ ನಿವಾಸಿಯಾಗಿರುವ ಸೈಯ್ಯದ್ ಮನ್ಸೂರ್ ರಾಮನಗರ ಪೊಲೀಸ್ ಕಾನ್ಸ್ ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯ ಕಾರಣ ರಜೆ ಮೇಲೆ ಕೆ.ಆರ್ ಪೇಟೆಗೆ ಬಂದಿದ್ದ ಸೈಯ್ಯದ್, ಸ್ನೇಹಿತ ಜೊತೆ ಬೈಕ್ ರೇಸ್ ವೀಕ್ಷಣೆಗೆ ಹೋದ ವೇಳೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ.
ರೇಸ್ ಸ್ಥಳದಿಂದ ಅಟ್ಟಾಡಿಸಿಕೊಂಡು ಹೋಗಿ ಹತ್ಯೆಗೆ ಯತ್ನಿಸಿದ್ದು, ಡ್ರೋನ್ ಕ್ಯಾಮೆರಾದಲ್ಲಿ ಹಲ್ಲೆಯ ಇಂಚಿಂಚು ದೃಶ್ಯಾವಳಿ ಸೆರೆಯಾಗಿದೆ. ಕಳೆದ ವರ್ಷ ನಾಗಮಂಗಲದ ಗಲಭೆಗೆ ಕಾರಣವಾಗಿದ್ದವರು ಈ ರೀತಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ನಾಗಮಂಗಲದ ಗಣೇಶ ಗಲಾಟೆಯಲ್ಲಿ ಭಾಗಿಯಾಗಿದ್ದ ಕಿಡಿಗೇಡಿಗಳು ಈ ಹಲ್ಲೆ ನಡೆಸಿದ್ದು, ನಾಗಮಂಗಲದ ಮುತುಬೀರ್, ಅಜ್ಜು, ಬಾಲಿ ಸೇರಿ ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.





