Mysore
19
few clouds

Social Media

ಸೋಮವಾರ, 12 ಜನವರಿ 2026
Light
Dark

ರೈತನ ಮಗಳ ಸಾಧನೆ | ಮೈಸೂರು ವಿ.ವಿ ವ್ಯಾಪ್ತಿಯ ಬಿ.ಇಡಿ ಕಾಲೇಜಿಗೆ ಮೊದಲ ರ‍್ಯಾಂಕ್‌, ಚಿನ್ನದ ಪದಕ

ಕಿಕ್ಕೇರಿ : ಗ್ರಾಮೀಣ ಬದುಕಿನ ಸವಾಲುಗಳ ನಡುವೆ ಬೆಳೆದ ರೈತನ ಮಗಳು ತನ್ನ ಅಕ್ಷರಾಸಕ್ತಿಯಿಂದ ಇಡೀ ತಾಲ್ಲೂಕಿನ ಹೆಮ್ಮೆಯ ಮಗಳಾಗಿ ಹೊರಹೊಮ್ಮಿದ್ದಾಳೆ.

ಮೈಸೂರಿನ ಪ್ರತಿಷ್ಠಿತ ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ಅಂತಿಮ ಪರೀಕ್ಷೆಯಲ್ಲಿ ಶೇ.97.9 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ. ಹರ್ಷಿತಾ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಮಾದಾಪುರ ಗ್ರಾಮದ ರೈತ ದಂಪತಿ ಪುಷ್ಪಲತಾ ಮತ್ತು ಯತಿರಾಜು ಅವರ ಪುತ್ರಿಯಾದ ಹರ್ಷಿತಾ, ಹೊಲ-ಗದ್ದೆ ಕೆಲಸಗಳ ನಡುವೆ, ಸೀಮಿತ ಸಂಪನ್ಮೂಲಗಳ ನಡುವೆಯೂ ಶಿಕ್ಷಣವನ್ನೇ ಜೀವನದ ಬೆಳಕಾಗಿಸಿಕೊಂಡು ಈ ಶ್ರೇಷ್ಠ ಸಾಧನೆಯನ್ನು ಗಳಿಸಿದ್ದಾರೆ. ಇವರ ಯಶಸ್ಸು ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿನಿಯರಿಗೆ ಹೊಸ ದಾರಿದೀಪವಾಗಿದೆ.

ಹರ್ಷಿತಾ ಅವರ ಶೈಕ್ಷಣಿಕ ಪಯಣ ಶ್ರಮ ಮತ್ತು ಶಿಸ್ತಿನ ಸಂಕೇತವಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಚನ್ನರಾಯಪಟ್ಟಣ ತಾಲ್ಲೂಕಿನ ಸೆಂಟಮೆರೀಸ್ ಶಾಲೆಯಲ್ಲಿ, ಎಸ್.ಎಸ್.ಎಲ್.ಸಿ ಶಿಕ್ಷಣವನ್ನು ರಾಧಾಕೃಷ್ಣ ಶಾಲೆ, ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದ್ದಾರೆ. ಪಿಯುಸಿ ವ್ಯಾಸಂಗವನ್ನು ಮೈಸೂರಿನ ಬಿ.ಜಿ.ಎಸ್. ಕಾಲೇಜಿನಲ್ಲಿ ಮಾಡಿದ್ದು, ನಂತರ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದು, ಮುಂದಿನ ಪೀಳಿಗೆಯನ್ನು ರೂಪಿಸುವ ಉದ್ದೇಶದಿಂದ ಬಿ.ಜಿ.ಎಸ್. ಮೈಸೂರಿನಲ್ಲಿ ಬಿ.ಇಡಿ. ವ್ಯಾಸಂಗಕ್ಕೆ ಕೈ ಹಾಕಿದರು.

ಬಿ.ಇಡಿ. ವ್ಯಾಸಂಗದ ಅವಧಿಯಲ್ಲಿ ತಮ್ಮ ಪ್ರತಿಭೆ, ಅಧ್ಯಯನದ ಶಿಸ್ತು ಹಾಗೂ ಬೋಧನಾ ಕೌಶಲ್ಯದಿಂದ ಎರಡು ಚಿನ್ನದ ಪದಕಗಳು ಹಾಗೂ ಎರಡು ನಗದು ಪುರಸ್ಕಾರಗಳನ್ನು ಪಡೆದು ಕಾಲೇಜಿನ ಇತಿಹಾಸದಲ್ಲೇ ವಿಶೇಷ ಸ್ಥಾನ ಗಳಿಸಿದ್ದಾರೆ. ಗ್ರಾಮೀಣ ಹಿನ್ನೆಲೆ, ರೈತ ಕುಟುಂಬದ ಮಗಳು ಎಂಬ ಅನೇಕ ಸವಾಲುಗಳ ನಡುವೆಯೂ ಹರ್ಷಿತಾ ಅವರ ಅಚಲ ಸಂಕಲ್ಪ ಮತ್ತು ಅಕ್ಷರ ಪ್ರೀತಿಯೇ ಈ ಯಶಸ್ಸಿನ ಬೆನ್ನೆಲುಬಾಗಿದೆ.

‘ಮಣ್ಣು ಹಿಡಿದ ಕೈಗಳು ಕೂಡ ಅಕ್ಷರದ ಮೂಲಕ ಭವಿಷ್ಯ ರೂಪಿಸಬಹುದು’ ಎಂಬುದಕ್ಕೆ ಹರ್ಷಿತಾ ಅವರ ಸಾಧನೆ ಜೀವಂತ ಸಾಕ್ಷಿಯಾಗಿದೆ. ಶಿಕ್ಷಣದ ಶಕ್ತಿಯಿಂದ ಬದುಕು ಮಾತ್ರವಲ್ಲ, ಸಮಾಜವನ್ನೂ ರೂಪಿಸಬಹುದು ಎಂಬ ಸಂದೇಶವನ್ನು ಅವರು ಸಾರಿದ್ದಾರೆ.

ಈ ಅಪೂರ್ವ ಸಾಧನೆಗಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಶಿಕ್ಷಕ ವೃಂದ ಹಾಗೂ ಮಾದಾಪುರ ಗ್ರಾಮದ ಸಾರ್ವಜನಿಕರು ಹರ್ಷಿತಾ ಮತ್ತು ಅವರ ಕುಟುಂಬವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ಮುಂದಿನ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.

Tags:
error: Content is protected !!