Mysore
19
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ ನೀಡಲಾಗಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರವನ್ನು ಸಿಆರ್‌ಎಸ್ ಅನುದಾನದ ಮೂಲಕ ಕೊಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಮಿಮ್ಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ರಾಜ್ಯದಲ್ಲೇ ಪ್ರಥಮವಾಗಿ ದಂತ ಚಿಕಿತ್ಸೆಯ ಆಶಾಕಿರಣ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ವಾತಾವರಣವೇ ವಿಷವಾಗಿ ಪರಿವರ್ತನೆಗೊಳ್ಳುತ್ತಿದೆ. ಆದ್ದರಿಂದಲೇ ಮಗು ಹುಟ್ಟುವ ಮೊದಲು ಹತ್ತಾರು ಚಿಕಿತ್ಸೆ ಹಾಗೂ ಹುಟ್ಟಿದ ನಂತರವೂ ಹಲವಾರು ಚಿಕಿತ್ಸೆಗಳಿಗೆ ಒಳಪಡಿಸಲಾಗುತ್ತಿದೆ ಎಂದ ವಿಷಾದ ವ್ಯಕ್ತಪಡಿಸಿದರು.

ಸಾರ್ವಜನಿಕರು ಕೂಡ ತಮ್ಮ ಆರೋಗ್ಯವನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು ಅದು ನಮ್ಮ ಕರ್ತವ್ಯ. ಎಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಇದನ್ನು ಓದಿ: ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ

ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಅತಿ ಮುಖ್ಯ, ವಸಡುಗಳ ಬದಲಾವಣೆ, ವಸ್ತುಗಳಿಗೆ ಚಿಕಿತ್ಸೆ ಇನ್ನೂ ಅನೇಕ ದಂತಕ್ಕೆ ಸಂಬಂಧ ಪಟ್ಟ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾರಂಭಿಕವಾಗಿ ಮಳವಳ್ಳಿ ಹಾಗೂ ನಾಗಮಂಗಲದ ವಸಡುಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತದೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯಡಿ ವಸಡುಗಳ ಚಿಕಿತ್ಸೆ ಪ್ರಾರಂಭವಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ದಂತ ಚಿಕಿತ್ಸೆಯ ಆಶಾಕಿರಣ ಯೋಜನೆಯಡಿ ನುರಿತ ದಂತ ವೈದ್ಯರು ಆಗಮಿಸಿ ತಪಾಸಣೆ ನಡೆಸಲಿದ್ದಾರೆ. 30-40 ಸಾವಿರ ತಗುಲುವ ಚಿಕಿತ್ಸೆಗಳನ್ನು ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ 2-3 ಸಾವಿರ ತೆಗೆದುಕೊಂಡು ಚಿಕಿತ್ಸೆ ಮಾಡಲಾಗುವುದು ಸಾರ್ವಜನಿಕರು ಇಂತಹ ಸದಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಮ್ಮ ಜಿಲ್ಲೆಯಲ್ಲಿಯೇ ಆದಿಚುಂಚನಗಿರಿ ಆಸ್ಪತ್ರೆ ಇದೆ. ಅಲ್ಲೂ ಸಹ ನುರಿತ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಿಯಾಗಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಶಿವಕುಮಾರ್, ಆರ್ ಸಿ ಎಚ್ ಅಧಿಕಾರಿ ಡಾ ಅಶ್ವತ್ಥ್, ಡಾ. ಆಶಾಲತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!