Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಧರ್ಮಸ್ಥಳ ಪ್ರಕರಣ | ಮಾಸ್ಕ್‌ ಮ್ಯಾನ್‌ ಪತ್ನಿ ಎನ್ನಲಾದ ಮಹಿಳೆ ಹೇಳಿದ್ದೇನು?

ಮಂಡ್ಯ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳುತ್ತಿರುವ ನನ್ನ ಗಂಡನ ಮಾತುಗಳೆಲ್ಲ ಸುಳ್ಳು. ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳ ಮತ್ತು ಶ್ರೀ ಮಂಜುನಾಥಸ್ವಾಮಿಯ ಹೆಸರನ್ನು ಹಾಳು ಮಾಡಿದ್ದಾನೆ ಎಂದು ಮಾಸ್ಕ್ ಮ್ಯಾನ್‌ನ ಮೊದಲ ಪತ್ನಿ ರತ್ನ ಅವರು ತಿಳಿಸಿದ್ದಾರೆ.

ನಾಗಮಂಗಲದಲ್ಲಿ ತನ್ನ ತಾಯಿಯ ಜತೆ ವಾಸವಾಗಿರುವ ರತ್ನ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮಂಡ್ಯ ತಾಲ್ಲೂಕು ಚಿಕ್ಕಬಳ್ಳಿ ಗ್ರಾಮದವನಾದ ಆತ (ಮಾಸ್ಕ್ ಮ್ಯಾನ್) ನನ್ನನ್ನು ವಿವಾಹವಾಗಿ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಕೆಲಸ ಮಾಡುತ್ತಿದ್ದನು. ಅವನು ಹೇಳಿರುವಂತೆ ನೂರಾರು ಶವಗಳನ್ನು ಹೂತಿಲ್ಲ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ವಾಸವಿದ್ದಾಗಲೇ ನಮಗೆ ಇಬ್ಬರು ಮಕ್ಕಳಾದವು. ನಂತರದಲ್ಲಿ ದಿನಂಪ್ರತಿ ಜಗಳವಾಡುತ್ತಿದ್ದನು, ಇದರಿಂದಾಗಿ ಧರ್ಮಸ್ಥಳದಿಂದ ನನ್ನನ್ನು ಕರೆದುಕೊಂಡು ಬಂದು ನನ್ನ ತವರು ಮನೆಗೆ ಬಿಟ್ಟು ಹೋಗಿ ೧೮ ವರ್ಷಗಳೇ ಕಳೆದವು. ಆಗ ಹೋದವನು ವಾಪಸ್ಸಾಗಲಿಲ್ಲ.

ಕೆಲ ವರ್ಷಗಳ ಹಿಂದೆ ಆತ ಇನ್ನೊಂದು ಮದುವೆಯಾಗಿರುವ ವಿಷಯ ತಿಳಿದು ನನ್ನ ಜೀವನಾಂಶಕ್ಕೆ ಹಣ ನೀಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿ, ಆತ ನನಗೆ ಯಾವುದೇ ಆಸ್ತಿ ಇಲ್ಲ, ಧರ್ಮಸ್ಥಳದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದೇನೆ, ನನಗೇ ಸಾಲುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿ ನನಗೆ ಹಣ ನೀಡಿಲ್ಲ.

ಮದುವೆಯಾದ ನನ್ನನ್ನು ಹಾಗೂ ಇಬ್ಬರು ಮಕ್ಕಳನ್ನು ಬಾಳಿಸದ ಆತ, ಯಾರದೋ ಮಾತನ್ನು ಕೇಳಿಕೊಂಡು ಪವಿತ್ರ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಮತ್ತು ಶ್ರೀ ಮಂಜುನಾಥಸ್ವಾಮಿಗೆ ಕಳಂಕ ತಂದಿದ್ದಾನೆ. ಅವನು ಮಾಡುತ್ತಿರುವುದು ಬಹಳ ತಪ್ಪು ಎಂದು ಹೇಳಿದರು.

Tags:
error: Content is protected !!