ಮದ್ದೂರು : ರಾಜ್ಯದ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕಗ್ಗಂಟಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮದ್ದೂರು ತಾಲ್ಲೂಕಿನ ಒಕ್ಕಲಿಗ ಸಮುದಾಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸಿದ್ದು ಸ್ಥಾನ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ಚುಂಚಶ್ರೀ ಗೆಳೆಯರ ಬಳಗ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾದಿಕಾರಿಗಳು ಹಾಗೂ ಮುಖಂಡರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಇದು ರೆಬೆಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ: ಸಂಸದ ಬಸವರಾಜ ಬೊಮ್ಮಾಯಿ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಹಾಗೂ ಸಧೃಡಗೊಳಿಸುವ ಮೂಲಕ 126ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರುಗಳನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವುದಾಗಿ ಹೈಕಮಾಂಡ್ ಒಪ್ಪಂದ ಮಾಡಿತ್ತು. ಆದರೆ, ಈಗಾಗಲೇ ಎರಡೂವರೆ ವರ್ಷಗಳ ಕಾಲ ಜನಾನುರಾಗಿಯಾಗಿ ಆಡಳಿತ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರು ಬಿಟ್ಟು ಕೊಡಬೇಕೆಂದು ಆಗ್ರಹಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ ಮಾತನಾಡಿ, ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ಮುನ್ನಡೆಸಿ ಈ ಹಂತಕ್ಕೆ ತಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳಿಸುವಲ್ಲಿಯೂ ಅವರದೇ ಪಾಲು ಹೆಚ್ಚಿದೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಇಷ್ಟೊಂದು ಶ್ರಮ ವಹಿಸಿರುವ ಅವರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಸಮುದಾಯದ ಕೂಗಾಗಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವರಾಂ, ಲಕ್ಷ್ಮಮ್ಮ, ಹರೀಶ್, ಶಿವಕುಮಾರ್, ಗೋವಿಂದರಾಜು, ಸುರೇಶ್, ಕುಮಾರ್, ಮುರಳಿ, ಮರಿದೇವರು, ಬಸವರಾಜು, ಪ್ರಭಾಕರ್, ನಾಗರಾಜ್, ಚನ್ನಪ್ಪ, ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಇದ್ದರು.





