Mysore
19
scattered clouds

Social Media

ಸೋಮವಾರ, 26 ಜನವರಿ 2026
Light
Dark

ಟನ್‌ ಕಬ್ಬಿಗೆ 5,000 ರೂ ನೀಡಲು ಸರ್ಕಾರಕ್ಕೆ ಆಗ್ರಹ

Demand for the government to provide ₹5000 per ton of sugarcane.

ಮದ್ದೂರು : ನವಲಗುಂದ, ನರಗುಂದದಲ್ಲಿ ರೈತರು ಗುಂಡಿಗೆ ಬಲಿಯಾದರು. ಆ ದಿನಕ್ಕೆ 45 ವರ್ಷಗಳಾಗಿದ್ದು, ಅದರ ಅಂಗವಾಗಿ ರೈತ ಹುತಾತ್ಮ ದಿನಾಚರಣೆಯನ್ನಾಗಿ ಪ್ರತಿ ವರ್ಷ ಆಚರಿಸುತ್ತಿದ್ದೇವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದರು.

ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಪ್ರೊ.ನಂಜುಂಡಸ್ವಾಮಿಯವರ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಜಯಘೋಷಗಳನ್ನು ಕೂಗಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮಾತನಾಡಿದರು.

ಆ ದಿನಗಳಲ್ಲಿ ರೈತರು ನವಲಗುಂದ, ನರಗುಂದದಲ್ಲಿ ರೈತ ಬೃಹತ್ ಚಳವಳಿ ನಡೆಯುವಾಗ ಮುಖ್ಯಮಂತ್ರಿ ಗುಂಡುರಾವ್ ಸರ್ಕಾರದಲ್ಲಿ ರೈತರ ಮೇಲೆ ನಡೆಸಿದ ಗುಂಡಿನ ದಾಳಿಗೆ ಸ್ಥಳದಲ್ಲೇ ಇಬ್ಬರು ರೈತರು ಸಾವನ್ನಪ್ಪಿದ ನೆನಪಿಗಾಗಿ ಈ ದಿನವನ್ನು ರೈತ ಹುತಾತ್ಮ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.

ಪ್ರತಿ ವರ್ಷ ನವಲಗುಂದ, ನರಗುಂದದಲ್ಲೇ ಆಚರಣೆ ಮಾಡುತ್ತಿದ್ದು, ಇಂದು ಹೋರಾಟದ ರೂಪರೇಷೆಗಳು ಬದಲಾವಣೆಯಾಗಿದ್ದು, ಪಟ್ಟಣದ ಪ್ರೊ.ನಂಜುಂಡಸ್ವಾಮಿ ಆವರಣದಲ್ಲಿ ಎಲ್ಲಾ ರೈತರು ಒಟ್ಟುಗೂಡಿ ಆಚರಿಸುತ್ತಿದ್ದೇವೆ ಎಂದರು.

ಜಿಲ್ಲಾ ಉಪಾಧ್ಯಕ್ಷ ರವಿ ಮಾತನಾಡಿ, ದೇವನಹಳ್ಳಿ ಚನ್ನರಾಯಪಟ್ಟಣದ ೧೩ ಹಳ್ಳಿಗಳ ೧,೭೭೭ ಎಕರೆ ಭೂ ಸ್ವಾನ ಕೈ ಬಿಟ್ಟಿರುವುದಕ್ಕೆ ಈ ಸರ್ಕಾರಕ್ಕೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ. ನುಡಿದಂತೆ ಈ ಕೆಳಕಂಡ ಒತ್ತಾಯಗಳನ್ನು ಈಡೇರಿಸಬೇಕೆಂದು ಈ ಮೂಲಕ ರೈತ ಹುತಾತ್ಮರ ದಿನದಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ಬೆಲೆ ಅಡಿ ವೈಜ್ಞಾನಿಕವಾಗಿ ೫,೦೦೦ ರೂ. ನಿಗದಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು, ಹಾಗೂ ರಾಜ್ಯ ಸರ್ಕಾರ ಬೆಲೆಯನ್ನು ಪ್ರತಿ ಟನ್‌ಗೆ ೫,೦೦೦ ರೂ.ವಿತರಿಸಬೇಕು ಎಂದರು.

ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಹೊರಟಿದ್ದು, ಈ ವ್ಯಾಪ್ತಿಯಲ್ಲಿ ಸೋಮನಹಳ್ಳಿ, ಚಾಮನಹಳ್ಳಿ, ಕೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲು ತೀವ್ರ ವಿರೋಧವಿದ್ದು, ಕೂಡಲೇ ಈ ನೀತಿಯನ್ನು ಕೈಬಿಡಬೇಕು ಎಂದರು.

ಕೆಆರ್‌ಎಸ್ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಲು ನಾಲೆಗಳಲ್ಲಿ ನಿರಂತರವಾಗಿ ನೀರು ಹರಿಸಬೇಕು. ಕಾಮಗಾರಿ ಹೆಸರಿನಲ್ಲಿ ರೈತರಿಗೆ ತೊಂದರೆ ಮಾಡಬಾರದು, ಮುಂಗಾರು ಪ್ರಾರಂಭವಾಗಿದ್ದು ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ ಕೊರತೆಯನ್ನು ಸರಿಪಡಿಸಬೇಕು. ತಪ್ಪಿದಲ್ಲಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಸಿ.ಉಮೇಶ್ ಎಚ್ಚರಿಸಿದರು.

ಗೌರವಾಧ್ಯಕ್ಷ ಜಿ.ಕೆ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಟಿ.ಎಲ್ ವಿನೋದ್‌ಬಾಬು, ಖಜಾಂಚಿ ಬೋರೇಗೌಡ, ರಾಜ್ಯ ಸಮಿತಿಯ ಮಲ್ಲಯ್ಯ, ರಾಮನಗರ ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ, ಕೃಷ್ಣಪ್ಪ, ರೈತ ಮುಖಂಡರಾದ ಲಿಂಗಪ್ಪಾಜಿ, ವರದಪ್ಪ, ರವಿ, ಅಶೋಕ್, ಶಶಿಧರ್, ಜಿ.ಎ.ಶಂಕರ್, ರಾಜು, ವೀರಪ್ಪ, ಶಂಕರೇಗೌಡ, ರತ್ನಮ್ಮ, ನಂದಿನಿ, ನಾಗರತ್ನ, ರಾಜಮಣಿ, ಸಾವಿತ್ರಮ್ಮ, ವಸಂತಮ್ಮ, ವೆಂಕಟೇಗೌಡ, ಸತೀಶ್, ಕೃಷ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:
error: Content is protected !!