Mysore
21
broken clouds
Light
Dark

ಜುಲೈ 8 ರಿಂದ ವಿ.ಸಿ.ನಾಲೆಗೆ ನೀರು ಹರಿಸಲು ತೀರ್ಮಾನ: ಎನ್.ಚಲುವರಾಯಸ್ವಾಮಿ

ಬೆಂಗಳೂರು: ಕಳೆದ 10 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಅಣೆಕಟ್ಟು 100 ಅಡಿ ತುಂಬಿದೆ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಾಯದ ಮೇರೆಗೆ ಜುಲೈ 8 ರ ಸಂಜೆಯಿಂದ 15 ದಿನಗಳ ಕಾಲ ವಿ.ಸಿ.ನಾಲೆಗೆ ನೀರು ಹರಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.‌

ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸಾಮಾನ್ಯವಾಗಿ ಪ್ರತಿವರ್ಷ ಕೆಆರ್ ಎಸ್ ಅಣೆಕಟ್ಟಿನಿಂದ ಜುಲೈ ಎರಡನೇ ವಾರದಿಂದ ವಿ.ಸಿ.ನಾಲೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ನಲ್ಲಿ ನಾಲೆಗೆ ನೀರು ಹರಿಸದ ಹಿನ್ನಲೆಯಲ್ಲಿ ಜುಲೈ 8 ರ ಸಂಜೆಯಿಂದ ಮುಂದಿನ 15 ದಿನಗಳ ಕಾಲ ವಿ.ಸಿ.ನಾಲೆಗೆ ನೀರು ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದು ಕೇವಲ ಕೆರೆ ಕಟ್ಟೆ ತುಂಬಿಸಲು ಹಾಗು ಜಾನುವಾರುಗಳ ಹಿತದೃಷ್ಟಿಯಿಂದ ನಾಲೆಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮುಂದಿನ 10 ದಿನಗಳ ನಂತರ ಮುಂಗಾರು ಮಳೆಯ ಪರಿಸ್ಥಿತಿ ಹಾಗು ಕೆಆರ್ ಎಸ್ ಅಣೆಕಟ್ಟಿನ ಒಳಹರಿವು ಗಮನಿಸಿಕೊಂಡು ರೈತರ ಬೆಳೆಗಳಿಗೂ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ವಿ.ಸಿ.ನಾಲೆಯ 36 ಕಿಮೀ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದ್ದು, ಬಾಕಿ 16 ಕಿಮೀ ಕಾಮಗಾರಿ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಿದ ನಂತರ ಮುಕ್ತಾಯಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಉದಯ್ ಗೌಡ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಂಜೇಗೌಡ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.