Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.

ಗ್ರಾಮದಲ್ಲಿ ಕಳೆದ ಡಿ.15ರಂದು ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಹಾಗೂ ಅಂಬೇಡ್ಕರ್ ಫ್ಲೆಕ್ಸ್ ಹರಿದಿದ್ದ ವಿಚಾರಕ್ಕೆ ಪರಿಶಿಷ್ಟರು, ಇತರೆ ಜನಾಂಗದ ನಡುವೆ ಘರ್ಷಣೆಯಾಗಿತ್ತು. ಇದಾದ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಡಿವೈಎಸ್‌ಪಿ ಯಶವಂತ್‌ಕುಮಾರ್, ಸಿಪಿಐ ಅನಿಲ್ ಅವರ ನೇತೃತ್ವದಲ್ಲಿ ಜಿಲ್ಲಾ ಶಶಸ್ತ್ರ ಪಡೆ ನಿಯೋಜನೆಗೊಳಿಸಲಾಗಿತ್ತು.

ಈ ಮಧ್ಯೆ ಮದ್ದೂರಿನ ತಾಲ್ಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಎರಡೂ ಕೋಮುಗಳ ಶಾಂತಿ ಸಭೆ ನಡೆಸಲಾಗಿತ್ತು. ಇಲ್ಲಿ ಪರಿಶಿಷ್ಟ ಜಾನಾಂಗದವರು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸ್ಥಳ ಕೊಡಿಸುವಂತೆ, ಬೊಮ್ಮಲಿಂಗೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಶುಭ ಸಮಾರಂಭಗಳಿಗೆ ಅವಕಾಶ ಕೊಡಿಸುವಂತೆ, ಮತ್ತು ಟ್ರಸ್ಟ್‌ನಲ್ಲಿ ಸದಸ್ಯತ್ವ ನೀಡುವಂತೆ, ಮೇಲ್ವರ್ಗದವರ ದೇವಾಲಗಳಿಗೆ ಪ್ರವೇಶ ಕೊಡಿಸುವಂತೆ ಮನವಿ ಮಾಡಿದ್ದರು.

ಶಾಂತಿ ಸಭೆಯಲ್ಲಿ ಮಾಡಿದ್ದ ಮನವಿ ಮೇರೆಗೆ ದಿನಾಂಕ ನಿಗಧಿಗೊಳಿಸಿದ್ದು, ಅದರಂತೆ ಇಂದು ಪೊಲೀಸ್ ಭದ್ರತೆಯಲ್ಲಿ ಬೊಮ್ಮಲಿಂಗೇಶ್ವರಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಮಾರಮ್ಮ, ಕಾಲಭೈರವ, ತಿಮ್ಮಪ್ಪ ದೇವಾಲಯಗಳಿಗೆ ದಲಿತ ಮುಖಂಡ ಸಿ.ಎ.ಕೆರೆ ಮೂರ್ತಿ ನೇತೃತ್ವದಲ್ಲಿ ಪರಿಶಿಷ್ಟ ಜನರು ಪ್ರವೇಶಿಸಿದರು.

ಇದನ್ನೂ ಓದಿ:-ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ : ಸಮಿತಿ ರಚನೆ

ಈ ಸಂದರ್ಭದಲ್ಲಿ ದಲಿತ ಮುಖಂಡ ಸಿ.ಎ.ಕೆರೆ ಮೂರ್ತಿ ಮಾತನಾಡಿ, ನಮ್ಮ ಜನಾಂಗದ ಮುಖಂಡರು 5 ಬೇಡಿಕೆಗಳನ್ನ ಶಾಂತಿ ಸಭೆಯಲ್ಲಿ ಮಂಡಿಸಿದ್ದು, ಅದರಲ್ಲಿ ಇಂದು ದೇವಾಲಯ ಪ್ರವೇಶಕ್ಕೆ ದಿನಾಂಕ ನಿಗಧಿಗೊಳಿಸಲಾಗಿತ್ತು. ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ 5 ದೇವಾಲಯಗಳಿಗೆ ಪ್ರವೇಶಿಸಲಾಯಿತು. ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನೀಡಿದ್ದು, ಅಲ್ಲಿಯವರೆಗೆ ಶಾಂತಿಯಿಂದ ವರ್ತಿಸುವಂತೆ ನಮ್ಮ ಮುಖಂಡರಿಗೆ, ಜನರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

ಈ ವೇಳೆ ಕೆ.ಎಂ.ದೊಡ್ಡಿ ಠಾಣಾ ಸಿಪಿಐ ಅನಿಲ್ ಅವರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಿಸಿದ್ದು, ಇಂದೂ ಕೂಡ ಅನಿಲ್ ಅವರು ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರವಿ, ಮೂರ್ತಿ, ಹನುಮಯ್ಯ, ಶಿವನಂಜಪ್ಪ, ವಸಂತ್ ಕುಮಾರ್, ಮಲ್ಲಯ್ಯ, ಬೊಮ್ಮಲಿಂಗಯ್ಯ ಸೇರಿದಂತೆ ಮತ್ತಿತರ ಪರಿಶಿಷ್ಟ ಮುಖಂಡರು ಇದ್ದರು.

Tags:
error: Content is protected !!