ಮಂಡ್ಯ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಹಂಬಲ ಬಹಳ ದಿನಗಳಿಂದ ಇದೆ. ಕೇವಲ ಒಕ್ಕಲಿಗರಲ್ಲದೆ ಅವರ ಇತರೆ ಅಭಿಮಾನಿಗಳ ಆಗ್ರಹವೂ ಆಗಿದೆ ಎಂದು ವಿಶ್ವ ಒಕ್ಕಲಿಗರ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ನಗರದ ಬಾಲಗಂಗಾಧರನಾಥ ಸಮುದಾಯ ಭವನದಲ್ಲಿ ಮಂಡ್ಯ ಜಿಲ್ಲಾ ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆ ವತಿಯಿಂದ ಶುಕ್ರವಾರ ನಡೆದ ಸಾಮೂಹಿಕ ಮಹಾಲಕ್ಷ್ಮಿ ಆಷಾಡ ಮಾಸದ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ದುಡಿದಿದ್ದಾರೆ. ಅವರೊಬ್ಬ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷ 135 ಸ್ಥಾನ ಗಳಿಸಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಬರಲು ಅವರು ಕಾರಣಕರ್ತರಾಗಿದ್ದಾರೆ. ಪಕ್ಷವನ್ನ ತಾಯಿ ರೀತಿ ಪ್ರೀತಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು. ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಕಾದು ನೋಡೋಣ, ಡಿ.ಕೆ. ಶಿವಕುಮಾರ್ ಖಂಡಿತ ಸಿಎಂ ಆಗೇ ಆಗ್ತರೆ. ಅವರು ಸಂಯಮ ವರ್ತಿಗಳು, ಶಿಸ್ತಿನ ಸಿಪಾಯಿ. ಅವರು ತಾಳ್ಮೆಯಿಂದ ಕಾದು, ಹೈಕಮಾಂಡ್‌ನಿಂದ ಅಧಿಕಾರ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಹಳೇ ಮೈಸೂರು ಭಾಗದ ಒಕ್ಕಲಿಗರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಈ ಭಾಗದಲ್ಲಿ ಡಿಕೆಶಿ ಪರ ಹೆಚ್ಚು ಒಲವು ತೋರಿದ್ದರಿಂದ 135 ಸ್ಥಾನ ಬರಲು ಕಾರಣವಾಯಿತು ಎಂದರು.





