ಮಂಡ್ಯ : ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಆದರೆ, ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೧೩೮ ಶಾಸಕರ ಪೈಕಿ ೩೪ ಜನ ಸಚಿವರಾಗಿದ್ದಾರೆ. ಸಚಿವ ಸ್ಥಾನದ ಉಳಿದ ಆಕಾಂಕ್ಷಿಗಳಿಗೆ ಪಕ್ಷ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ, ೩೪ ಜನರಲ್ಲಿ ಎಷ್ಟು ಸಚಿವರನ್ನು ಕೈಬಿಡುತ್ತಾರೆ ಎನ್ನುವುದು ಪಕ್ಷಕ್ಕೆ ಬಿಟ್ಟ ವಿಚಾರ. ಯಾವುದೇ ಬದಲಾವಣೆ ಇದ್ದರೂ ಅದನ್ನು ಮುಖ್ಯಮಂತ್ರಿ ಮಾಡುತ್ತಾರೆ. ಅಂತೆಯೇ ಸಿಎಂ ಡಿನ್ನರ್ ಮೀಟಿಂಗ್‌ಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:-ಮಳೆಯಿಂದ ಒಡೆದು ಹೋಗಿದ್ದ ಸಿಡಿಎಸ್ ನಾಲೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅನಾರೋಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇವತ್ತು ಡಿಸ್‌ಚಾರ್ಜ್ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಬೇರೆಯವರ ಮೂಲಕ ಅವರ ಆರೋಗ್ಯ ವಿಚಾರಿಸಿದ್ದೇನೆ. ನೇರವಾಗಿ ಮಾತನಾಡುವ ಪರಿಸ್ಥಿತಿ ಇಲ್ಲ. ಸಾಧ್ಯವಾದರೆ ಭೇಟಿ ಮಾಡುತ್ತೇನೆ. ಅವರ ಆರೋಗ್ಯ ಚೇತರಿಕೆ ಆಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.





