ಬೆಂಗಳೂರು: ನಾಡು, ಹಾಗೂ ನೆಲೆದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜೊತೆಗೆ ಹೆಚ್ಚು ಅರ್ಥಪೂರ್ಣ, ವೈವಿದ್ಯಮಯವಾಗಿರುವಂತೆ ಮಂಡ್ಯ ಜಿಲ್ಲೆಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕಿದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ವಿಕಾಸ ಸೌಧದ ತಮ್ಮ ಕಚೇರಿಯಲ್ಲಿಂದು ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆ ಕುರಿತು ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳನ್ನು ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಸಮ್ಮೇಳನ ಆಯೋಜಿಸುವಂತೆ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದರು.
ಎಲ್ಲಾ ಸಮಿತಿಗಳಲ್ಲಿ ಸ್ಥಳೀಯ ಶಾಸಕರಿಗೆ ನೇತೃತ್ವ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಸಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಜೊತೆಗೆ ರಾಜ್ಯದ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಚಲುವರಾಯಸ್ವಾಮಿ ಹೇಳಿದರು.
ಎಲ್ಲಾ ಸಮಿತಿಗಳ ನಡುವೆ ಯಾವುದೇ ಗೊಂದಲವಿಲ್ಲದಂತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಇದು ಇಡೀ ರಾಜ್ಯದ ನುಡಿ ಹಬ್ಬ ಜಿಲ್ಲೆಯಾದ್ಯಂತ ಸಂಭ್ರಮ ಸಡಗರ ಇರುವಂತೆ ಎಲ್ಲಾ ವರ್ಗದವರನ್ನು ಸೇರಿಸಿ ಸಮ್ಮೇಳನ ಸಂಘಟಿಸಿ ಎಂದು ಕರೆ ನೀಡಿದರು.
ಶಾಸಕರಾದ ರಮೇಶ್ ಬಾಬು ಬಂಡಿ ಸಿದ್ದೇಗೌಡ, ಪಿ.ಎಂ ನರೇಂದ್ರ ಸ್ವಾಮಿ, ಉದಯ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷ ನಾಡೋಜ ಮಹೇಶ್ ಜೋಷಿ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಸಮ್ಮೇಳನದ ಸಂಘಟನೆ ಕುರಿತು ಮಾಹಿತಿ ಹಾಗೂ ಅಭಿಪ್ರಾಯ, ಸಲಹೆಗಳನ್ನು ನೀಡಿದರು.
ಲಾಂಛನ ರಚಿಸಿದ ಕಲಾವಿದರ ಶಂಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಾ. ಪಟೇಲ್ ಪಾಂಡು, ನೇ.ಭ ರಾಮಲಿಂಗ ಶೆಟ್ಟಿ, ಮೀರಾ ಶಿವಕುಮಾರ್, ಡಾ ಪದ್ಮಿನಿ ನಾಗರಾಜ್, ಎಂ.ಎಸ್. ಶ್ರೀನಿವಾಸ ಮೂರ್ತಿ ಸಭೆಯಲ್ಲಿ ಹಾಜರಿದ್ದರು