ಮಂಡ್ಯ: ಜಾತಿಗಣತಿ ವರದಿಯಿಂದ ಸಮಾಜ ಒಡೆಯುವ ಕೆಲಸವಾಗುತ್ತಿದೆ ಎಂಬ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಜಾತಿಗಣತಿ ವರದಿ ಬಗ್ಗೆ ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮಾತನಾಡಲು ಏನೂ ಉಳಿದಿಲ್ಲ. ಮೀನು ಕ್ಷಣದಲ್ಲೇ ಕೈಯಿಂದ ಜಾರಿ ಹೋದಂತೆ ಏನೂ ಸಿಗುತ್ತಿಲ್ಲ. ಹಾಗಾಗಿ ಜಾತಿ ಗಣತಿ ವರದಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಜಾತಿ ಗಣತಿ ವರದಿ ಬಗ್ಗೆ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಾತಿ ಗಣತಿ ವರದಿಯಲ್ಲಿ ಏನೇನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಸುಮ್ಮನೆ ಯಾರೂ ಕೂಡ ಮಾತನಾಡಬಾರದು. ಜಾತಿ ಗಣತಿ ಬಗ್ಗೆ ಊಹಾಪೋಹ ಎಬ್ಬಿಸುವುದು ಸರಿಯಲ್ಲ. ಜಾತಿ ಗಣತಿಯಿಂದ ಯಾವ ಸಮುದಾಯಕ್ಕೂ ಅನ್ಯಾಯ ಆಗಲ್ಲ. ಈಗಾಗಲೇ ವರದಿ ಸಚಿವ ಸಂಪುಟದಲ್ಲಿ ಮಂಡನೆ ಆಗಿದೆ. ವರದಿ ಬಗ್ಗೆ ಕೂಲಂಕುಷವಾಗಿ ಚರ್ಚೆ ಆಗಬೇಕಿದೆ ಎಂದರು.