ಯೋಜನೆಗಳು ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ
ಮಂಡ್ಯ: ಕೆಆರ್‌ಎಸ್ ಅಣೆಕಟ್ಟಿನ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ, ೬ನೇ ಹಂತದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಗಳು ಅಣೆಕಟ್ಟಿಗೆ ಅಪಾಯ ತರುವಂತದ್ದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯೆ ಪ್ರವೇಶಿಸಿ ರದ್ದುಪಡಿಸಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಸಿ ಹಾಗೂ ರೈತ ಮುಖಂಡರೂ ಆದ ಸುನಂದ ಜಯರಾಂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆ ಬಳಿ ಮೋಜು ಮಸ್ತಿಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ, ಅವಶ್ಯಕತೆಯೇ ಇಲ್ಲದ ಕಾವೇರಿ ಆರತಿಯ ಅಗತ್ಯವಿಲ್ಲ, ರೈತರ ಬದುಕು ಹಸುನಾಗಿಸಲು ನಿರ್ಮಾಣವಾದ ಅಣೆಕಟ್ಟೆಯ ನೀರು ಬೆಂಗಳೂರಿಗೆ ಹಂತ ಹಂತವಾಗಿ ಕೊಂಡೊಯ್ಯುತ್ತಿದ್ದು ಈ ಭಾಗದ ರೈತರ ಬದುಕನ್ನು ದುಸ್ತರಕ್ಕೆ ದೂಡಲಾಗುತ್ತಿದೆ ಎಂದರು.
ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ೨೬೬೩ ಕೋಟಿ ರೂ, ಕಾವೇರಿ ಆರತಿಗೆ ೧೦೦ ಕೋಟಿ ರೂ, ಬೆಂಗಳೂರಿಗೆ ನೀರು ಕೊಂಡೊಯ್ಯಲು ೭೫೦೦ ಕೋಟಿ ರೂ ವ್ಯಯಿಸುತ್ತಿದ್ದು, ಈ ಎಲ್ಲಾ ಯೋಜನೆಗಳು ಅಣೆಕಟ್ಟಿನ ಭದ್ರತೆಗೆ ಧಕ್ಕೆ ತರುವಂತವಾಗಿದ್ದು ಇವನ್ನು ಕೂಡಲೇ ಕೈ ಬಿಡುವುದಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಅಣೆಕಟ್ಟಿನ ವ್ಯಾಪ್ತಿಗೆ ಶ್ರೀರಂಗಪಟ್ಟಣದ ೩ ಹಾಗೂ ಪಾಂಡವಪುರದ ೩ ಸೇರಿ ಒಟ್ಟು ೬ ಗ್ರಾ.ಪಂಚಾಯಿತಿಗಳು ಬರಲಿದ್ದು, ಸದರಿ ಯೋಜನೆಗಳ ವಿರುದ್ಧವಾಗಿ ೪ ಗ್ರಾ.ಪಂಚಾಯಿತಿಗಳು ಹಕ್ಕು ಮಂಡಿಸಿದ್ದು, ೧ ಗ್ರಾ.ಪಂಚಾಯಿತಿ ತನ್ನ ನಿಲುವು ತಿಳಿಸಿಲ್ಲ, ಮತ್ತೊಂದು ಗ್ರಾ.ಪಂಚಾಯಿತಿ ಡೋಲಾಯಮಾನ ಸ್ಥಿತಿಯಲ್ಲಿ ಸ್ಥಿರತೆಯನ್ನು ತೋರುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ವಿಪಕ್ಷಗಳು, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು ಚಕಾರವೆತ್ತುತ್ತಿಲ್ಲ, ಜಿಲ್ಲೆಯ ಶಾಸಕರುಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಈ ಬಗ್ಗೆ ಎಷ್ಟೇ ತಾಕುವಂತೆ ಹೇಳಿದರೂ ತಡೆಗೆ ಮುಂದಾಗದಿದ್ದು, ಅವರಿಗೆ ಎಚ್ಚರಿಕೆ ಗಂಟೆ ನೀಡುತ್ತಿದ್ದೇವೆ, ಯಾರೂ ಸದರಿ ಯೋಜನೆಗಳ ಹೆಸರಿನಲ್ಲಿ ಅಣೆಕಟ್ಟೆಯ ಬಳಿಯೂ ಸುಳಿಯಬಾರದು. ಈ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಧನಿಯೆತ್ತಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆಯ ಮಂಜುನಾಥ್, ಎಸ್.ನಾರಾಯಣ್, ಕೃಷ್ಣ, ಗ್ರಾ.ಪಂಚಾಯಿತಿ ಉಪಾಧ್ಯಕ್ಷ ಪಾಪಣ್ಣ, ರವಿಶಂಕರ್, ನರಸಿಂಹ ಇದ್ದರು.





