ಮಂಡ್ಯ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅವೈಜ್ಞಾನಿಕ ಆರ್ಥಿಕ ನೀತಿ ಹಾಗೂ ವಿದ್ಯೆ, ಅಧಿಕಾರ ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆಗಳು ಸಮಾನವಾಗಿ ಹಂಚಿಕೆ ಮಾಡುವ ವೈಫಲ್ಯದ ಫಲವಾಗಿ ಬಂಡವಾಳ ಶಾಹಿ ಮೈಕ್ರೋ ಫೈನಾನ್ಸ್‌ಗಳು ರಾಜ್ಯದ ಬಡ ಜನತೆಯ ಮೇಲೆ ದೌರ್ಜನ್ಯ ನಡೆಸುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡನೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಪಿಮುಷ್ಠಿಗೆ ಸಿಲುಕಿ ಸಾಲಗಾರರಾಗಿರುವುದು ೭೬ ವರ್ಷ ನಮ್ಮನ್ನಾಳಿದ ಸರ್ಕಾರಗಳ ಸಾಧನೆಯಾಗಿದೆ. ಇದರಿಂದಾಗಿ ಬಡತನ, ಆರ್ಥಿಕ ಹೀನತೆ ಮಿತಿ ಮೀರಿದ್ದು, ಕೊಲೆ, ಸುಲಿಗೆ, ದೌರ್ಜನ್ಯ, ಆತ್ಮಹತ್ಯೆಯಂತಹ ಕೃತ್ಯಗಳು ನಡೆಯುವಂತಾಗಿದೆ ಎಂದರು.
ಇದಕ್ಕೆ ಪ್ರತಿಕೂಲವೆಂಬಂತೆ ಜಾತಿ ವರದಿಜಾರಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದ ಕೇಂದ್ರ ಸರ್ಕಾರವು ನಾನು ಘೋಷಿಸಿದ ಬಜೆಟ್‌ನಲ್ಲಿ ರೈತ, ಕಾರ್ಮಿಕ, ಶೋಷಿತ, ಕೆಳಸಮುದಾಯ ವಿರೋಧಿತನವನ್ನು ತೋರುತ್ತಿದೆ. ಅಲ್ಲದೇ ಈ ಬಜೆಟ್ ಎಸ್ಸಿ ಎಸ್ಟಿ ವಿರೋಧಿ ಬಜೆಟ್ ಆಗಿದೆ ಎಂದು ಕಿಡಿ ಕಾರಿದರು.
ದೇಶ, ರಾಜ್ಯದಲ್ಲಿಯೂ ಸಹ ಶಿಕ್ಷಣ ಮತ್ತು ಆರೋಗ್ಯ ಸೇವೇ ವ್ಯಾಪಾರಿಕರಣಗೊಳಿಸಿ ಸಂವಿಧಾನ ವಿರೋಧಿ ಕೃತ್ಯ ವೆಸಗಿರುವ ಕೇಂದ್ರ ಸರ್ಕಾರ ಸಂವಿಧಾನಾತ್ಮಕವಾಗಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ನೀಡಲು ಎಷ್ಟೇ ಒತ್ತಾಯಿಸಿದರು, ಸ್ಪಂಧಿಸದೇ ಇರುವುದನ್ನು ಕದಸಂಸ ಖಂಡಿಸುತ್ತದೆ ಎಂದು ಹೇಳಿದರು.
ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್ ಮಾತನಾಡಿ, ಸರ್ಕಾರ ಖಾಸಗಿ ಬಂಡವಾಳ ಶಾಹಿ ಮೈಕ್ರೋ ಫೈನಾನ್ಸ್‌ಗಳನ್ನು ಕೂಡಲೇ ಬಂದ್ ಮಾಡಿಸಬೇಕು, ಕಿರುಕುಳ ನೀಡುವ ಫೈನಾನ್ಸ್ ಮಾಲೀಕರು ಹಾಗೂ ಸಿಬ್ಬಂದಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ಬಡ್ಡಿ, ಚಕ್ರ ಬಡ್ಡಿ ಮೂಲಕ ವಸೂಲಿ ಮಾಡಿದ ಹಣವನ್ನು ಮುಟಟುಗೋಲು ಹಾಕಿಕೊಂಡು ಸಂತ್ರಸ್ಥ ಕುಟುಂಬಕ್ಕೆ ಹಿಂದಿರುಗಿಸಬೇಕು. ಸಾಲ ವಸೂಲಾತಿ ಉಪಟಳದಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದಲೇ ತಲಾ ೫೦ ಲಕ್ಷ ಪರಿಹಾರ ನೀಡಲು ಕ್ರಮ ವಹಿಸಬೇಕು, ಮೈಕ್ರೋ ಫೈನಾನ್ಸ್‌ಗಳ ಸಾಲವನ್ನು ಕೇಂದ್ರ, ರಾಜ್ಯಸರ್ಕಾಗಳೇ ತುಂಬಿ ಜನರನ್ನು ಋಣ ಮುಕ್ತರಾಗಿಸಬೇಕು, ಜನರ ಜೀವ ಮತ್ತು ಮೂಲಭೂತ ಅವಶ್ಯಕತೆಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಕೂಡಲೇ ಸುಘ್ರೀವಾಜ್ಞೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ ಆನಂದ್, ತಿಮ್ಮೇಶ್, ಸುಮಾಮಣಿ, ಮುತ್ತುರಾಜು ಇದ್ದರು.