ಮಂಡ್ಯ: ನಿಖಿಲ್ ಸೋಲಿಗೆ ಪ್ರತಿಕ್ರಿಯೆ ನೀಡಿರುವ ಸಿ.ಪಿ.ಯೋಗೇಶ್ವರ್ ದೇವೇಗೌಡರನ್ನು ಮನೆಯಲ್ಲೇ ಇರಿ ಎಂಬ ಹೇಳಿಕೆ ನೀಡಿದ್ದು, ದೇವೇಗೌಡರು ಸೋತರೂ ಮನೆಯಲ್ಲಿ ಕೂರುವವರಲ್ಲ, ಅದಕ್ಕಾಗಿ ದೇವೇಗೌಡರನ್ನು ಗೌಡರ ಗೌಡ ಎನ್ನುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಟಾಂಗ್ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆದ್ದಿದ್ದಾರೆ. ಜನರು ನೀಡಿದ ತೀರ್ಪಿಗೆ ನಾವು ತಲೆಬಾಗಿದ್ದೇವೆ. ಯೋಗೇಶ್ವರ್ ಗೆಲುವಿನ ಮದದಲ್ಲಿ ದೇವೇಗೌಡರನ್ನು ಮನೆಯಲ್ಲಿ ಇರಿ ಎನ್ನುವುದು, ಕುಮಾರಸ್ವಾಮಿ ಅವರನ್ನು ರಣಹೇಡಿ ಎಂದಿರುವುದು ಸರಿಯಲ್ಲ, ಈ ಮಾತಿನಿಂದ ಅವರ ಗೌರವ ಹೆಚ್ಚಾಗುವುದಿಲ್ಲ. ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿ, ಶ್ರೇಷ್ಠ ನಾಯಕರಾಗುವ ಭ್ರಮೆಯಲ್ಲಿದ್ದಾರೆ ಎಂದು ಛೇಡಿಸಿದರು.
ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವಿದೆ ಎಂದು ದೂಷಿಸುವ ಯೋಗೀಶ್ವರ್ ಹೋದ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕೀಯ ಇಲ್ಲವೇ, ಯೋಗೀಶ್ವರ್ ಮನೆಯಲ್ಲೇ ರಾಜಕೀಯ ಇವೇ, ಸಡೂರಿನಲ್ಲಿ ನಿಂತವರು ಯಾರು ಎಂಬುದನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು ಎಂದರು.
ಚುನಾವಣೆಯಲ್ಲಿನ ಸೋಲು ಯೋಗೇಶ್ವರ್‌ಗೂ ಸಹ ಹೊಸತಲ್ಲ, ಯೋಗೇಶ್ವರ್ ಎಷ್ಟು ಸಲ ಡುಮ್ಕಿ ಹೊಡೆದಿದ್ದಾರೆ ಎಂಬುದು ನಮಗೆ ಗೊತ್ತು. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಮಂಡ್ಯ ಲೋಕಸಭಾ ಚುನಾವಣೆಗೆ ಅನಿವಾರ್ಯವಾಗಿ ನಿಖಿಲ್ ಅವರನ್ನು ಕರೆತಂದೆವು, ಮಂಡ್ಯದಲ್ಲಿಯೂ ಸಹ ಅಂಬರೀಶ್ ಅಣ್ಣನ ಅನುಕಂಪದ ಹಿನ್ನೆಲೆ ನಿಖಿಲ್‌ಗೆ ಸೋಲಾಗಿತ್ತು ಎಂದು ಸಮರ್ಥಿಸಿಕೊಂಡರು.
ಕುಮಾರಣ್ಣನನ್ನು ರಣಹೇಡಿ ಎಂದ ಯೋಗೇಶ್ವರ್ ನಿಜವಾದ ರಣಹೇಡಿ, ನಾಮಪತ್ರ ಸಲ್ಲಿಸಲ್ಲು ಎರಡು ದಿನ ಇರುವಾಗ ಕಾಂಗ್ರೆಸ್‌ಗೆ ಹೋಡಿ ಹೋಗಿದ್ದು ಅವರು ಎಂಬುದನ್ನು ಮರೆಯುವಂತಿಲ್ಲ, ಜನರ ತೀರ್ಮಾನದ ಮುಂದೆ ಯಾರು ನಾಯಕನಾಗಲು ಆಗಲ್ಲ ಎಂದು ಕಿಡಿ ಕಾರಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕ್ಷೇತ್ರದ ಬೀದಿ ಬೀದಿ ಹೇಳುತ್ತದೆ. ದೇವೇಗೌಡರ ಕುಟುಂಬದ ಬಗ್ಗೆ ಮಾತಾನಾಡಿದರೆ ಗೂಟದ ಕಾರು ಸಿಗುತ್ತೆ ಅಂದುಕೊಂಡಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೊಂಡ ಯೋಗೇಶ್ವರ್ ಎಂತಹ ದೊಡ್ಡ ಹುತ್ತಕ್ಕೆ ಹೋಗಿದ್ದಾರೆ ಗೊತ್ತಿಲ್ಲ. ಅಲ್ಲಿರುವುದು ಘಟಸರ್ಪಗಳು. ಮುಂದೆ ಯೋಗೇಶ್ವರ್‌ನ್ನು ಕೆಮ್ಮಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಚನ್ನಪಟ್ಟಣಕ್ಕೆ ನೀರಾವರಿ ಒದಗಿಸಲು ಇಗ್ಗಲೂರು ಡ್ಯಾಂ ಕಟ್ಟಿದು ದೇವೇಗೌಡರು, ರಾಮನಗರ ಚನ್ನಪಟ್ಟಣ ತಾಲೂಕುಗಳಿಗೆ ಕಾವೇರಿ ನೀರು ಒದಗಿಸಲು ಕುಮಾರಸ್ವಾಮಿ ಅವರು ಹಲವು ಯೋಜನೆಯನ್ನು ರೂಪಿಸಿದ್ದಾರೆ. ದೇವೇಗೌಡರು ಕಟ್ಟಿದ ಡ್ಯಾಂ ನಿಂದ ೧೭ ಕೆರೆ ತುಂಬಿಸಿ ನಾನೇ ಭಗೀರಥ ಅನ್ನೋದು ಅಲ್ಲ ಎಂದು ಕುಟುಕಿದರು.
ಜೆಡಿಎಸ್ ಪಕ್ಷವನ್ನ ಮುಗಿಸುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಪಕ್ಷದಿಂದ ಒಬ್ಬನನ್ನು ಕರೆದುಕೊಂಡು ಹೋಗು ನೋಡೋಣಾ. ಈ ಹಿಂದೆ ಬಿಟ್ಟಿ ದುಡ್ಡು ಸಿಕ್ಕೋದ್ರಿಂದ ಒಂದಷ್ಟು ಜನರನ್ನು ಕರೆದುಕೊಂಡು ಹೋಗಿದ್ದಿರಿ, ಈಗ ಯಾರೂ ಎಲ್ಲರೂ ದುಡ್ಡಿನ ಹಿಂದೆ ಬಿದ್ದಿಲ್ಲ ಎಂದು ಟಾಂಗ್ ನೀಡಿದ ಸಿ.ಎಸ್.ಪುಟ್ಟರಾಜು ದೇವೇಗೌಡ ಬಗ್ಗೆ ಮಾತನಾಡುವಾಗ ಎಚ್ಚರ ಅವರು ಆಕಾಶ.ಆಕಾಶಕ್ಕೆ ಉಗುಳಿದರೆ ಎದು ನಿನ್ನ ಮೇಲೆ ಬೀಳುತ್ತದೆ. ದೇವೇಗೌಡರ ಬಗ್ಗೆ ಲಘುವಾಗಿ ಮಾತಾಡಿದರೆ ನಿನಗೆ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಯೋಗೇಶ್ವರ್‌ಗೆ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದಲ್ಲಿ ಜಿ.ಟಿ.ದೇವೇಗೌಡರ ಅಸಮಾಧಾನ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದ ಅವರು, ಪಕ್ಷ ಎಂದರೇ ಸಣ್ಣಪುಟ್ಟ ಅಸಮಾಧಾನ ಇರುವುದು ಸಾಮಾನ್ಯ ಅದನ್ನು ಸರಿಪಡಿಸುವ ಕೆಲಸವನ್ನ ಮಾಡುತ್ತೇವೆ. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸವಾಗುತ್ತದೆ ಎಂದ ಅವರು, ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ನಡುವೆ ಭಿನ್ನಾಭಿಪ್ರಾಯ ಇದೆ ಅದನ್ನು ಸರಿಪಡಿಸುತ್ತೇವೆ ಎಂದು ಉತ್ತರ ನೀಡಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ರಾಮಚಂದ್ರು ಇದ್ದರು.