Mysore
25
overcast clouds
Light
Dark

ಭಗೀರಥ ಮಹರ್ಷಿಯ ಚಿಂತನೆ ಹಾಗೂ ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ಡಾ. ಕುಮಾರ

ಮಂಡ್ಯ : ಭಗೀರಥ ಮಹರ್ಷಿಯು ಹಿಂದಿನ ಕಾಲದ ಸಮಾಜದಲ್ಲಿ ಮಹಾನ್ ಚಿಂತಕರಾಗಿದ್ದವರು. ಅವರ ಆದರ್ಶ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಇಂದು ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಇಂದು ಈ ನಾಡಿನ ಮಹಾ ಪುರುಷರಾದ ಭಗೀರಥ ಮಹರ್ಷಿಯ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಗಂಗೆಯನ್ನು ತನ್ನ ತಪಸ್ಸಿನ ಫಲವಾಗಿ ಭೂ ಲೋಕಕ್ಕೆ ಕರೆ ತಂದಂತಹ ಮಹಾನ್ ಪುರುಷ ಭಗೀರಥ ಮಹರ್ಷಿ ಎಂಬ ಐತಿಹಾಸಿಕ ಹಿನ್ನೆಲೆಯಿದೆ. ಅಂದಿನ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ಅವರು ನೀಡಿದ್ದು, ಭಗೀರಥರ ನಿಷ್ಠೆ, ದೃಢವಿಶ್ವಾಸ, ಛಲ ಹಾಗೂ ಸತತ ಪ್ರಯತ್ನದ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಎಲ್ಲರ ಜೀವನದಲ್ಲಿ ಪ್ರಯತ್ನ ಎಂಬುದು ನಿರಂತರವಾಗಿರಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು ಅವರು ಮಾತನಾಡಿ ಭಗೀರಥ ಮಹರ್ಷಿಯು ಒಳ್ಳೆಯ ತಪಸ್ಸು ಹಾಗೂ ತಮ್ಮ ಸತತ ಪ್ರಯತ್ನಗಳ ಮೂಲಕ ಗಂಗೆಯನ್ನು ಭೂಲೋಕಕ್ಕೆ ತಂದು, ಇಡೀ ಭರತ ಖಂಡವನ್ನು ಪವಿತ್ರ ಭೂಮಿಯನ್ನಾಗಿ ಮಾಡಿದ್ದಾರೆ. ಈ ಮೂಲಕ ಅಂದಿನ ಕೃಷಿಕ ಸಮಾಜದ ಉದ್ಧಾರಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಪ್ರಸಿದ್ಧ ಪುರಾಣಗಳಿಂದ ತಿಳಿಯಬಹುದು. ಪ್ರಸ್ತುತ ಗಂಗಾ ನದಿಯು ಜಗತ್ತಿನ ಶ್ರೇಷ್ಠ ನದಿಯಾಗಿದೆ ಎಂದರು.

ಪ್ರತಿಯೊಬ್ಬರೂ ಭಗೀರಥ ಮಹರ್ಷಿಯ ಜಯಂತಿ ದಿನವಾದ ಇಂದು ಅವರ ಸ್ಮರಣೆಯನ್ನು ಮಾಡಿ ಭಕ್ತಿಯಿಂದ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.