Mysore
18
scattered clouds

Social Media

ಗುರುವಾರ, 22 ಜನವರಿ 2026
Light
Dark

ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ ದೋಖಾ : ಎಚ್‌ಡಿಕೆ ಆರೋಪ

ಮಂಡ್ಯ : ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ರೈತ ಭವನದ ಬಳಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.

ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆಯನ್ನು ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಇದಾಗಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಬೆಂಗಳೂರು ನಗರ ಜನರಿಗೆ ದೀಪಾವಳಿ ಕೊಡುಗೆ ನೀಡಲು ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲಿ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.

ಇದನ್ನು ಓದಿ: ಹೆಚ್ಎಂಟಿಗೆ ಮರುಜೀವ : DPR ಸಿದ್ಧವಾಗುತ್ತಿದೆ ಎಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು; ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ, ಇವರು ಎಷ್ಟು ಕೊಟ್ಟಿದ್ದಾರೆ ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಸುಸಜ್ಜಿತ ಆಟೋ ನಿಲ್ದಾಣ ಲೋಕಾರ್ಪಣೆ
ಮಂಡ್ಯದ ಸಂಜಯ ನಗರ ವೃತ್ತದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿಯ ಆಟೋ ನಿಲ್ದಾಣವನ್ನು ಇದೇ ಸಂದರ್ಭದಲ್ಲೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದು ಸಚಿವರು ಹೇಳಿದರು.

ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮಂತ್ರಿ ಸಿ ಎಸ್ ಪುಟ್ಟರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮುಖಂಡರಾದ ರಾಮಚಂದ್ರ, ನಗರ ಸಭಾಧ್ಯಕ್ಷ ಪ್ರಕಾಶ್ ಮೊದಲಾದವರು ಇದ್ದರು.

Tags:
error: Content is protected !!