Mysore
25
overcast clouds
Light
Dark

ಬಸವಣ್ಣನವರ ಆಧ್ಯಾತ್ಮಿಕ ಮೌಲ್ಯ, ಚಿಂತನೆ ಅಳವಡಿಸಿಕೊಳ್ಳಿ: ಡಾ.ಕುಮಾರ

ಮಂಡ್ಯ: ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಧ್ಯಾತ್ಮಿಕ ಮೌಲ್ಯ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಶುಕ್ರವಾರ (ಮೇ.10) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಜ್ಞಾನ ಭಂಡಾರ ವಿದ್ದಂತೆ. ಪ್ರತಿ ಮನೆಯಲ್ಲೂ ಪೋಷಕರು ತಮ್ಮ ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ತಿಳಿಸಿ, ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದರು.

ಬಸವಣ್ಣನವರು 12 ಶತಮಾನದಲ್ಲಿ ತಲೆದೂರಿದ್ದ ಜಾತಿ ಪದ್ಧತಿಯನ್ನು ವಿರೋಧಿಸಿ, ಈ ಜಾತಿ ಪದ್ಧತಿಯನ್ನು ಹೋಗಲಾಡಿಸಬೇಕು ಎಂದು ಟೊಂಕ ಕಟ್ಟಿ ನಿಂತಿದ್ದರು. ವಚನಗಳ ಮೂಲಕ ಪ್ರತಿಯೊಬ್ಬರಿಗೂ ವಿಚಾರ ವಿನಿಮಯ ಮಾಡಿ ಸಮಾಜದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಜ್ಞಾನ ಮತ್ತು ಅನ್ನ ದಾಸೋಹ ನಡೆಸುವುದರ ಜೊತೆಗೆ ಜನರಿಗೆ ಅರ್ಥವಾಗುವ ಸರಳವಾದ ವಚನಗಳ ಮೂಲಕ ಜೀವನದ ಸಂದೇಶಗಳನ್ನು ನೀಡಿದರು. ಅವರು ನೀಡಿರುವ ವಚನಗಳು ಇಂದಿಗೂ ಪ್ರಸ್ತುತ ಎಂದು ಪ್ರತಿಪಾದಿಸಿದರು.

ಬಸವಣ್ಣನವರ ನುಡಿಯಂತೆ ದೇಹವೇ ದೇಗುಲ, ಶಿರವೇ ಕಳಸ ಎಂಬುದನ್ನು ಪಾಲಿಸಬೇಕು, ಮಾನವೀಯತೆ ಗಿಂತ ದೊಡ್ಡದ್ದು ಯಾವುದು ಇಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವರು ಬಸವಣ್ಣ. ಇವರ ವಚನಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಜಗತ್ತಿನಾದ್ಯಂತ ವಿಸ್ತಾರವಾಗಿವೆ ಎಂದರು.

ಮಹಾ ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಮದುವೆ ಆದ ನಂತರ ತನ್ನ ಸಂಸಾರದಲ್ಲಿ ಅಥವಾ ಸುತ್ತಮುತ್ತ ಪರಿಸರದಲ್ಲಿ ಕಂಡಂತಹ ತೊಡಕು ಮತ್ತು ಸಮಸ್ಯೆಗಳನ್ನು ಆಧ್ಯಾತ್ಮಿಕ ನೆಲಗಟ್ಟೆಯಲ್ಲೆ ಮನ ಪರಿವರ್ತನೆ ಮಾಡುತ್ತಿದ್ದರು, ಸ್ವತಃ ಆಕೆಯ ಕುಟುಂಬದಲ್ಲಿ ಇದ್ದಂತಹ ಮೈದುನನ ಮನ ಪರಿವರ್ತನೆ ಮಾಡಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಮ್ ಬಾಬು ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.