ಮಂಡ್ಯ: ಸಾಮಾಜಿಕ ಪಿಡುಗುಗಳಾದ ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಮೊದಲಾದವುಗಳನ್ನು ತೊಡೆದುಹಾಕಲು ಜ್ಞಾನ ಮತ್ತು ವಿದ್ಯೆದ ಜೊತೆಗೆ ಯುವಜನರಲ್ಲಿ ಅರಿವು ಅಗತ್ಯವಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಹಾಗೂ ಬೆಂಗಳೂರು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷ ಕೆ ಸೋಮಶೇಖರ್ ಹೇಳಿದರು.
ಅವರು ಇಂದು(ನ.30) ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ( ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ (ಫೋಕ್ಸೋ) – 2012, ಕುರಿತು ಜಿಲ್ಲಾ ಮಟ್ಟದ ಬೃಹತ್ ತರಬೇತಿ ಕಾರ್ಯಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವ ವ್ಯಕ್ತಿಯೂ ಸಹ ಹುಟ್ಟಿನಿಂದ ತಪ್ಪುಗಳನ್ನು ಮಾಡಲಾರ. ಕಾನೂನಿನ ಅರಿವು ಇಲ್ಲದವರು ಮಾತ್ರ ತಪ್ಪನ್ನು ಎಸಗಲು ಸಾಧ್ಯ. ಸಂವಿಧಾನದ ಅರಿವು ಇದ್ದಾಗ ಯಾರೂ ಕೂಡ ಅಪರಾಧವನ್ನು ಎಸೆಗಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಎಲ್ಲಾ ವಿಧಿಗಳನ್ನು ಅರ್ಥ ಮಾಡಿಕೊಂಡು ನಿಮ್ಮ ಜ್ಞಾನವನ್ನು ಹರಿತಗೊಳಿಸಿಕೊಳ್ಳಬೇಕು ಎಂದು ನುಡಿದರು.
ಪಿಸಿ & ಪಿಎನ್ ಡಿಟಿ ಕಾಯ್ದೆಯು ಹೆಣ್ಣು ಭ್ರೂಣಹತ್ಯೆಯನ್ನು ತಡೆಗಟ್ಟಲು ಮತ್ತು ಭಾರತದಲ್ಲಿ ಇಳಿಮುಖವಾಗುತ್ತಿರುವ ಲಿಂಗಾನುಪಾತವನ್ನು ತಡೆಗಟ್ಟಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿ&ಪಿಎನ್ ಡಿಟಿ) ಅಧಿನಿಯಮ, 1994 ಎಂಬ ಭಾರತದ ಸಂಸತ್ತು ಹೊರಡಿಸಿದ ಅಧಿನಿಯಮವಾಗಿದೆ. ಪ್ರಸವಪೂರ್ವ ಲಿಂಗ ನಿರ್ಧರಣೆಯನ್ನು ನಿಷೇಧಿಸಿದೆ. ಇಂತಹ ಅಪರಾಧಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ಜರುಗಿಸಲಾಗುವುದು ಎಂದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣದಿಂದ ಜಿಲ್ಲೆಗೆ ಕಳಂಕ ಬಂದಿದ್ದು, ಈ ಕಳಂಕವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಜೊತೆಗೆ ಬಾಲ್ಯ ವಿವಾಹಗಳು ನಡೆಯುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ: 1098/112 ಗೆ ಕರೆ ಮಾಡಿ ತಿಳಿಸಬೇಕು ಎಂದರು.
ಪೋಕ್ಸೋ ಕಾಯ್ದೆ ಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಾಗಿದ್ದು, 2012 ರಲ್ಲಿ ಜಾರಿಗೆ ತರಲಾಯಿತು. ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲು ಕಾಯ್ದೆಯನ್ನು ತರಲು ಕಾರಣವಾಗಿದೆ. ಈ ಕಾನೂನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಮತ್ತು ಹುಡುಗಿಯರಿಬ್ಬರಿಗೂ ಅನ್ವಯಿಸುತ್ತದೆ. ಪೋಕ್ಸೋ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಶಿಕ್ಷೆಗೆ ಅವಕಾಶವಿದೆ, ಮೊದಲು ಮರಣದಂಡನೆಗೆ ಯಾವುದೇ ಅವಕಾಶವಿರಲಿಲ್ಲ, ಆದರೆ ನಂತರ ಜೀವಾವಧಿ ಶಿಕ್ಷೆಯಂತಹ ಶಿಕ್ಷೆಯನ್ನು ಈ ಕಾನೂನಿಗೆ ಸೇರಿಸಲಾಯಿತು. ಪೋಕ್ಸೋ ಕಾಯ್ದೆಯಲ್ಲಿ ವಿವಿಧ ರೀತಿಯ ಶಿಕ್ಷೆಗಳನ್ನು ನೀಡಲಾಗಿದೆ. ಇದರಲ್ಲಿ ಅಪರಾಧಿಗೆ 20 ವರ್ಷ ಜೈಲಿನಿಂದ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೇ ದಂಡವನ್ನೂ ತೆರಬೇಕಾಗಬಹುದು ಎಂದರು.
ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಿಂದ ಜಿಲ್ಲೆಗೆ ಬಂದಿರುವ ಕಳಂಕವನ್ನು ತೊಲಗಿಸಿ: ಕೆ ನಾಗಣ್ಣಗೌಡ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ನಾಗಣ್ಣ ಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಕಂಡುಬಂದಿರುವ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಿಂದ ಜಿಲ್ಲೆಗೆ ಕಳಂಕ ಬಂದಿದ್ದು, ಈ ನಿಟ್ಟಿನಲ್ಲಿ ಕಳಂಕವನ್ನು ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಯಾವುದೇ ಮಗುವು ಭ್ರೂಣದಿಂದಲೇ ಜೀವಿಸುವ ಹಕ್ಕನ್ನು ಪಡೆದುಕೊಂಡಿರುತ್ತದೆ. ಆದ್ದರಿಂದ ಹೆಣ್ಣಾಗಲಿ ಗಂಡಾಗಲಿ ಕಾರಣ ಯಾವುದೇ ಇದ್ದರು ಮಗುವಿನ ಹತ್ಯೆಯು ದೊಡ್ಡ ಅಪರಾಧವಾಗಿದೆ. ಮಕ್ಕಳೆಲ್ಲರೂ ಸಮಾನರಾಗಿದ್ದು, ಯಾವುದೇ ಭೇದ ಭಾವವೀರಬಾರದು. ಅವರಿಗೆ ಸಮಾನ ಶಿಕ್ಷಣ ಕೊಡಿಸುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ನ ಅಡಿಯಲ್ಲಿ ಬರುವ ಗ್ರಾಮ ಕಾವಲು ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಕಾವಲು ಸಮಿತಿಯು ಬಲವರ್ಧನೆಯಾಗಬೇಕು ಎಂದರು.
ಕಾರ್ಯಾಗಾರದಲ್ಲಿ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷ ಎಂ ಬೃಂಗೇಶ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಎಂ ಟಿ ರಾಜೇಂದ್ರ, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಆನಂದ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಬೆಂಗಳೂರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಬಿ ಹೆಚ್ ನಿಶ್ಚಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಮೋಹನ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್ ರಾಜಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಶ್ಮಿ ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.