Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕನ್ನಡದ ಕಂಪನ್ನು ಅಮೇರಿಕಾದಲ್ಲಿ ಹರಡುತ್ತಿರುವ ಅಕ್ಕ ಒಂದು ದೊಡ್ಡ ಸಂಸ್ಥೆ: ಎನ್.ಚಲುವರಾಯಸ್ವಾಮಿ

ಮಂಡ್ಯ: ಕನ್ನಡದ ಕಂಪನ್ನು ಅಮೇರಿಕಾದಲ್ಲಿ ಹರಡುತ್ತಿರುವ ಅಕ್ಕ ಒಂದು ದೊಡ್ಡ ಸಂಸ್ಥೆಯಾಗಿದ್ದು, ಅಕ್ಕ ಸಂಸ್ಥೆಗೆ ಸರ್ಕಾರ ಹಾಗೂ ಸ್ವಾಮೀಜಿಗಳ ಬೆಂಬಲವಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಇಂದು ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಮೆರಿಕದ ಅಕ್ಕ ಸಂಸ್ಧೆಯ 25ನೇ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಕ್ಕ 5K ವಾಕಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರವಾಗಲಿ ಸಾರ್ವಜನಿಕರಾಗಲಿ ಒಂದು ಕಾರ್ಯಕ್ರಮವನ್ನು ಮಾಡಲು ಎಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಿ ಅಕ್ಕ ಸಂಸ್ಥೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದನ್ನು ಓದಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿದೆ: ಆರ್‌.ಅಶೋಕ್‌ ವ್ಯಂಗ್ಯ

ಪ್ರಸ್ತುತ ಅಕ್ಕ ಸಂಸ್ಥೆ ಅಧ್ಯಕ್ಷರಾಗಿರುವ ಮಧುರಂಗಯ್ಯ ಅವರು ಮುಂದಿನ ದಿನಗಳಲ್ಲಿ ಅಮೇರಿಕಾದಲ್ಲಿ ನೆಡೆಯುವ ಅಕ್ಕ ಒಕ್ಕೂಟ ಸಂಸ್ಥೆ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರು ತಮ್ಮ ಪೂರ್ವ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿಯೇ ಮುಗಿಸಿದ್ದು ಕರ್ನಾಟಕಕ್ಕೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಇದು ನಗರದಲ್ಲಿ 5k ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಸಚಿವ ಪುಟ್ಟರಾಜು ಅವರು ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಕಂಪನ್ನು ಅಮೇರಿಕಾದಲ್ಲಿ ಅಕ್ಕ ಸಂಸ್ಥೆ ಸೂಸುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾವೆಲ್ಲರೂ ಅಮೇರಿಕದಲ್ಲಿ ಅಕ್ಕ ಸಂಸ್ಥೆ ಆಯೋಜಿಸುವ ಕನ್ನಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ. ಮಧುರಂಗಯ್ಯ ಅವರ ಸಾರಥ್ಯದಲ್ಲಿ ಅಕ್ಕ ಸಮ್ಮೇಳನದ ಕುರಿತು ದೊಡ್ಡ ಮಟ್ಟದಲ್ಲಿ ಜಾಗೃತಿ ಮುಗಿಸಲು 5k ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.

ನಟ ನೆನಪಿರಲಿ ಪ್ರೇಮ್ ಅವರು ಮಾತನಾಡಿ, ನಮ್ಮ ಊರು ನಮ್ಮ ದಾರಿ ಎಂಬ ಕಾರ್ಯಕ್ರಮವನ್ನು ಮಧುರಂಗಯ್ಯ ಅವರು ಮಂಡ್ಯದಲ್ಲಿ ಆಯೋಜಿಸಿದ್ದಾರೆ. ಕಾರಣ ಇಷ್ಟೇ ನಾವು ಎಷ್ಟೇ ಬೆಳೆದರು ನಮ್ಮ ಊರನ್ನು ಮರೆಯಬಾರದು ಎಂದು ಅಕ್ಕ ಸಂಸ್ಥೆ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ವಾಕಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!