ಅಣ್ಣೂರು ಸತೀಶ್
ಭಾರತೀನಗರ: ಸಾಕಷ್ಟು ಜನರು ಪಾರಿವಾಳವನ್ನು ಸಾಕುತ್ತಾರೆ. ಅದರಲ್ಲಿ ಕೆಲವರು ರೇಸ್‌ಗಾಗಿ ಪಾರಿವಾಳವನ್ನು ಸಾಕುವವರಿದ್ದಾರೆ. ಹಲವೆಡೆ ಈ ಪಾರಿವಾಳ ರೇಸ್ ದೊಡ್ಡ ಕ್ರೇಜ್ ಆಗಿದೆ. ರೇಸ್‌ಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಪಾರಿವಾಳವನ್ನು ಖರೀದಿಸುವವರಿದ್ದಾರೆ.
ಇದೀಗ ಇಂತಹದ್ದೇ ಒಂದು ರೇಸ್‌ನಲ್ಲಿ ಪಾಲ್ಗೊಂಡಿದ್ದ ಪಾರಿವಾಳ ೫೨ ದಿನ, ೧೭೯೦ ಕಿ.ಮೀ. ಕ್ರಮಿಸಿ ತನ್ನ ಮಾಲೀಕನನ್ನ ಹುಡುಕಿಕೊಂಡು ಬಂದು ದಾಖಲೆ ಬರೆದಿದೆ. ಇಂತಹ ಅಚ್ಚರಿ ಘಟನೆಗೆ ಮಂಡ್ಯ ಜಿಲ್ಲೆಯ ಕೊಕ್ಕರೆಬೆಳ್ಳೂರಿನಲ್ಲಿ ಸಾಕ್ಷಿಯಾಗಿದೆ.
ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ: ಮಾಲೀಕನನ್ನ ಹುಡುಕಿಕೊಂಡು ದೆಹಲಿಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. ೫೨ ದಿನದಲ್ಲಿ ೧೭೯೦ ಕಿ.ಮೀ ಕ್ರಮಿಸಿದ ಅತಿ ಚಿಕ್ಕ ವಯಸ್ಸಿನ ಅಭಿಮನ್ಯು(ಈ ಪಾರಿವಾಳ) ಸಾಧನೆ ಮಾಡಿದೆ.
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್‌ನಿಂದ ಡೆಲ್ಲಿ ರೇಸ್ ಆಯೋಜಿಸಲಾಗಿತ್ತು. ಈ ರೇಸ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಟ್ಟು ೨೨ ಪಾರಿವಾಳಗಳು ಭಾಗವಹಿಸಿದ್ದವು. ಎಲ್ಲ ಪಾರಿವಾಳಕ್ಕೂ ರೇಸ್‌ಗೂ ಮುನ್ನವೇ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏಪ್ರಿಲ್.೫ ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು.
ಡೆಲ್ಲಿ ರೇಸ್‌ನಲ್ಲಿ ಭಾಗವಹಿಸಿದ್ದ ಮಂಡ್ಯದ ಕೊಕ್ಕರೆ ಬೆಳ್ಳೂರಿನ ಶ್ರೀಧರ್ ಎಂಬುವವರಿಗೆ ಸೇರಿದ ಒಂದು ವರ್ಷದ ಅಭಿಮನ್ಯು ಹೆಸರಿನ ಪಾರಿವಾಳ, ದೆಹಲಿಯಿಂದ ಮೇ.೨೮ಕ್ಕೆ ಮಂಡ್ಯಕ್ಕೆ ವಾಪಸ್ಸಾಗಿದೆ. ಆ ಮೂಲಕ ಬರೋಬ್ಬರಿ ೧೭೯೦ ಕಿ.ಮೀ. ದಾಟಿ ತನ್ನ ಮಾಲೀಕನನ್ನು ಹುಡುಕಿಕೊಂಡು ಬಂದಿದೆ.
೨೨ ಪಾರಿವಾಳಗಳ ಪೈಕಿ ೧೪ ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿವೆ. ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಪಾರಿವಾಳವಾಗಿರುವ ಮಂಡ್ಯದ ಅಭಿಮನ್ಯು, ತನ್ನ ಮಾಲೀಕನನ್ನ ಹುಡುಕಿಕೊಂಡು ಬರುವ ಮೂಲಕ ಹೊಸ ಸಾಧನೆ ಮಾಡಿದೆ. ಆ ಮೂಲಕ ಮೊದಲ ರೇಸ್‌ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ.





