ಮಂಡ್ಯ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಅವರದ್ದೇ ಆದ ಅವಸರಗಳು. ತನ್ನ ಸುತ್ತಮುತ್ತಲಿನ ನೊಂದವರು, ಸಂಕಷ್ಟದಲ್ಲಿರುವವರ ಕಡೆ ಕಣ್ಣೆತ್ತಿಯೂ ನೋಡದಷ್ಟು ಧಾವಂತ ಆವರಿಸಿದೆ. ಹೀಗಿರುವಾಗ ಅನಾಥರು, ಅಶಕ್ತರು, ವೃದ್ಧರು, ಮಾನಸಿಕ ಅಸ್ವಸ್ಥರಾಗಿ ರಸ್ತೆಯಲ್ಲಿ ಕಂಡವರ ಗೋಜಿಗೆ ಹೋಗದೆ ತಮ್ಮ ಪಾಡಿಗೆ ನಡೆದು ಹೋಗುವುದನ್ನು ಕಾಣುತ್ತೇವೆ. ಆದರೆ, ಹಲಗೂರು ಬಳಿಯ ಲಿಂಗಪಟ್ಟಣದ ನಿವೃತ್ತ ಶಿಕ್ಷಕ ಸುಂದ್ರಪ್ಪ ಅವರು ತಮ್ಮ ಮಾನವೀಯ ಸ್ಪಂದನೆಯನ್ನು ಇನ್ನೂ ಮುಂದುವರೆಸಿದ್ದಾರೆ. ಅನಾಥರು, ಅಸ್ವಸ್ಥರುಗಳನ್ನು ಗುರುತಿಸಿ, ಅವರ ಸೇವೆ ಮಾಡುವ ಕಾಯಕದಲ್ಲಿ ಸಾರ್ಥಕತೆ ಕಂಡುಕೊಂಡಿರುವುದು ವಿಶೇಷವಾಗಿದೆ.
ಅನಾಥರು, ವೃದ್ಧರು, ಅಶಕ್ತರು, ಕುಟುಂಬದಿಂದ ಯಾವುದೋ ಕಾರಣಗಳಿಗೆ ಪರಿತ್ಯಕ್ತರಾದ ಹಲವಾರು ಜೀವಗಳು, ಮತ್ತೆ ಯಾವುದೋ ಊರಿನಲ್ಲಿ ತಮ್ಮ ಕೊನೆಯ ದಿನಗಳನ್ನು ನರಳಿ, ಬೆಂದು ಇಹಲೋಕ ತ್ಯಜಿಸುವುದನ್ನು ಕಾಣುತ್ತೇವೆ. ಇವರ ಅಂತರಾಳದ ಸಂಕಷ್ಟವನ್ನು ಅರಿಯಲು ಯಾರಿಗೂ ಸಮಯವಿಲ್ಲ.
ಇಂತಹ ಸನ್ನಿವೇಶದಲ್ಲಿ ಸುಂದ್ರಪ್ಪ ಅವರು ಯಾವುದೇ ಅಳುಕಿಲ್ಲದೆ ಅನಾಥ, ಅಸ್ವಸ್ಥರ ನೆರವಿಗೆ ಧಾವಿಸುತ್ತಾರೆ. ಅವರು ಶಿಕ್ಷಕರಾಗಿ ಕರ್ತವ್ಯದಲ್ಲಿ ಇರುವಾಗಲೂ ಇಂತಹ ಮಾನವೀಯ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಮೊನ್ನೆ ಹಲಗೂರು ಬಳಿಯ ಮುಖ್ಯರಸ್ತೆಯ ಬದಿಯಲ್ಲಿ ಕಸದ ರಾಶಿಯ ನಡುವೆ ಅಸ್ಪಸ್ಥರಾಗಿ ಬಿದ್ದಿದ್ದ ನಿತ್ರಾಣ ವ್ಯಕ್ತಿಯನ್ನು ಕಂಡರು.
ಸುಮಾರು ೬೦ ವರ್ಷದ ವ್ಯಕ್ತಿ ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ಬಿದ್ದಿದ್ದರು. ಇದನ್ನು ಕಂಡು ಮರುಗಿದ ಸುಂದ್ರಪ್ಪ ಆತನ ನೆರವಿಗೆ ಧಾವಿಸಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಕೂಡಲೇ ತಮ್ಮ ಆಸಕ್ತ ಸ್ನೇಹಿತರಾದ ಮಳವಳ್ಳಿ ತಾಲ್ಲೂಕು ಕರವೇ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಮಹೇಶ್, ಲೋಕೇಶ್, ರಾಮಚಂದ್ರಗೌಡ, ಸಿದ್ದರಾಜು, ಅವರೊಂದಿಗೆ ಧಾವಿಸಿದರು. ಅನಾಥ ವ್ಯಕ್ತಿಯ ತಲೆ ಕೂದಲು, ಗಡ್ಡ ಮೀಸೆ ತೆಗೆಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಹೊಸದಾದ ಹೊದಿಕೆಗಳನ್ನು ಕೊಡಿಸಿ, ಚಾವಣಿಯ ನೆರಳಿಗೆ ಸ್ಥಳಾಂತರಿಸಿದರು. ಮಾತ್ರವಲ್ಲ ದಾನಿ ಲೋಕೇಶ್ ಅವರು ಪ್ರತಿನಿತ್ಯ ಈತನಿಗೆ ಆಹಾರ ಒದಗಿಸುವುದಾಗಿ ಒಪ್ಪಿ, ಈತನ ಆಹಾರ ಜವಾಬ್ದಾರಿ ನನ್ನದು ಎಂದು ಒಪ್ಪಿಕೊಂಡು ಅದರಂತೆ ಅವರು ಆಹಾರ ಸರಬರಾಜು ಮಾಡುತ್ತಿದ್ದಾರೆ.
ಸುಂದ್ರಪ್ಪ ಮತ್ತು ಅವರ ತಂಡದ ಇಂತಹ ಮಾನವೀಯ ಕಾರ್ಯ ೨೪ನೆಯದು ಎನ್ನುತ್ತಾರೆ, ಹಲಗೂರಿನ ಜನತೆ ಈ ತಂಡದ ಕೆಲಸವನ್ನು ಮನಸಾರೆ ಮೆಚ್ಚಿ ಶ್ಲಾಘಿಸಿದ್ದಾರೆ. ವಾಸ್ತವದಲ್ಲಿ ಸಮಾಜ ಕಲ್ಯಾಣ ಇಲಾಖೆ, ಸಂಘ ಸಂಸ್ಥೆಗಳು, ಮಾನವೀಯ ಮನಸ್ಸುಗಳು ಸಂಘಟಿತರಾಗಿ, ಕಾಳಜಿ ವಹಿಸಿ ಮಾಡಬೇಕಿದ್ದ ಇಂತಹ ಮಾನವಿಯ ನೆರವಿನ ಕಾರ್ಯವನ್ನು ಲಿಂಗಪಟ್ಟಣದ ನಿವೃತ್ತ ಶಿಕ್ಷಕ ಸುಂದ್ರಪ್ಪ ಮತ್ತು ಅವರ ಈ ತಂಡ ಎಡಬಿಡದೆ ಮಾಡಿಕೊಂಡು ಬರುತ್ತಿರುವುದು ಇತರರಿಗೂ ಪ್ರೇರಣೆಯಾಗಬೇಕಿದೆ.
“ಇದು ಒಬ್ಬ ವ್ಯಕ್ತಿ ಮಾಡಬಹುದಾದ ಕೆಲಸವಲ್ಲ. ನಮ್ಮ ತಂಡದ ಎಲ್ಲರೂ ಕೈಜೋಡಿಸಿದ್ದರಿಂದ ಇಂತಹ ಕೆಲಸಗಳನ್ನು ಮಾಡಿಕೊಂಡು ಬರಲಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗಿಸುವುದು, ಬಡರೋಗಿಗಳಿಗೆ ಔಷಧಿ ಕೊಳ್ಳಲು ನೆರವಾಗುವುದು… ಇವೇ ಮುಂತಾದ ಸಾಮಾಜಿಕ ಕಾರ್ಯಗಳನ್ನು ನಮ್ಮ ಕೈಲಾದಷ್ಟು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಉದ್ದೇಶ ಇಷ್ಟೆ, ನಮ್ಮ ಈ ಕಾರ್ಯ ಇತರರಿಗೆ ಪ್ರೇರಣೆ ಆದರೆ ಸಾಕು, ನಮ್ಮ ಶ್ರಮ ಸಾರ್ಥಕವಾಗುತ್ತದೆ. ಸದ್ಯದಲ್ಲೇ ಮಂಡ್ಯ ಹಾಗೂ ಜಿಲ್ಲೆಯ ಇತರೆಡೆಗಳಲ್ಲೂ ಇಂತಹ ಅನಾಥರು ಅಶಕ್ತರು ಕಂಡು ಬಂದಲ್ಲಿ ಅವರಿಗೂ ಹೊಸ ರೂಪ ಕೊಡಲು ನಾವು ಸಿದ್ದರಿದ್ದೇವೆ.”
-ಸುಂದ್ರಪ್ಪ, ನಿವೃತ್ತ ಶಿಕ್ಷಕರು, ಲಿಂಗಪಟ್ಟಣ
–ಹೇಮಂತ್‌ಕುಮಾರ್





