ಮಂಡ್ಯ: ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ 12 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಕೃಷಿ ಹಾಗೂ ಮಂಡ್ಯ ಜಿಲ್ಸಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಂಡ್ಯ ಕ್ಷೇತ್ರದ ಶಾಸಕರಾದ ರವಿಕುಮಾರ್ ಗಣಿಗ ಸೇರಿದಂತೆ ಮಂಡ್ಯ ನಗರದ ಕೆಹೆಚ್‌ಬಿ ಕಾಲೋನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಡ್ಯ ಜಿಲ್ಲೆಯಲ್ಲಿ ಮಳೆಹಾನಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ನಿನ್ನೆ ಮೊನ್ನೆಯಿಂದ ಮಂಡ್ಯದಲ್ಲೂ ಸಾಕಷ್ಟು ಮಳೆಯಾಗಿದೆ. ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಸಿಡಿಎಸ್ ನಾಲೆ ಒಡೆದಿದೆ. ರವಿ ಶಾಸಕರಾದ ಬಳಿಕ ತಡೆಗೋಡೆ ನಿರ್ಮಾಣ ಮಾಡಿಸಿದ್ದರು. ತಡೆಗೋಡೆ ನಿರ್ಮಾಣದಿಂದ ಹೆಚ್ಚಿನ ತೊಂದರೆ ಆಗುತ್ತಿಲ್ಲ. ರಸ್ತೆ, ಒಳಚರಂಡಿ ಕಾಮಗಾರಿ ಶೀಘ್ರ ಆರಂಭಿಸುತ್ತೇವೆ ಎಂದು ಹೇಳಿದರು.
ಮೊನ್ನೆಯ ಮಳೆಗೆ ಮಂಡ್ಯ ಜಿಲ್ಲೆಯಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರಾಜ್ಯದಲ್ಲಿ 12 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಕೂಡಲೇ ಬೆಳೆಹಾನಿ ಬಗ್ಗೆ ಸರ್ವೆ ಮಾಡಿಸಿ ಪರಿಹಾರ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.





