ಮಂಡ್ಯ: ಶ್ರೀರಂಗಪಟ್ಟಣ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 100 ಕೋಟಿ ರೂ ವೆಚ್ಚದಲ್ಲಿ ಡಿ.ಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.
ಅವರು ಇಂದು(ನ.28) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಶ್ರೀ ರಂಗನಾಥ ಸ್ವಾಮಿ ದೇವಾಲಯವನ್ನು ಕೇಂದ್ರವಾಗಿ ಇರಿಸಿಕೊಂಡು ಇದರ ಸುತ್ತಲಿನ 5.5 ಕಿಮೀ ನಲ್ಲಿ ಬರುವ ಪ್ರವಾಸಿ ತಾಣಗಳಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಇದರಲ್ಲಿ ಒಡೆಯರ್ ಅವರ ಜನ್ಮಸ್ಥಳ, ಪುರಾತನ ಗಾಟ್ಗಳ ಸಂರಕ್ಷಣೆ, ವಿವಿಧ ರೀತಿಯ ಸೂಚನಾ ಪಲಕಗಳು, ಪುರಾತನ ಕಾಲದಲ್ಲಿ ಯುದ್ಧದಲ್ಲಿ ಉಪಯೋಗಿಸುತ್ತಿದ್ದ ಶಸ್ತ್ರಸ್ತಗಳು, ಕಲ್ಯಾಣಿ, ಮಂಟಪ, ರಸ್ತೆಗಳು ಸೇರಿದಂತೆ ವಿವಿಧ ರೀತಿಯ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ಯೋಜನೆ ಸಂಪೂರ್ಣವಾಗಿ ಸಿದ್ಧವಾದ ನಂತರ ಶ್ರೀರಂಗಪಟ್ಟಣ ಶಾಸಕರೊಂದಿಗೆ ಸಭೆ ನಡೆಸಿ ನಂತರ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಅಧಿಕಾರಿಗಳಿಗೆ ಸಿದ್ಧತೆ ನಡೆಸುವಂತೆ ತಿಳಿಸಿದರು.
ಈ ಯೋಜನೆಯಿಂದ ಪ್ರವಾಸೋದ್ಯಮ ಉತ್ತೇಜನ ನೀಡುವುದರ ಜೊತೆಗೆ ಹಲವಾರು ಉದ್ಯೋಗಗಳನ್ನು ಸೃಷ್ಠಿಸಬಹುದು. ಬಹಳಷ್ಟು ಕೊಳಗಳು ಹಾಗೂ ಸ್ಥಳಗಳಲ್ಲಿ ಬರುವ ಆದಾಯದಿಂದ ಸ್ವಚ್ಛತೆ ಯನ್ನು ಕಾಪಾಡಬಹುದು ಎಂದರು.
ರಾಜ್ಯ ಪುರತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಮಾತನಾಡಿ, ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕೆಲವು ದುರಸ್ತಿ ಕಾಮಗಾರಿಗಳು ನಡೆಯಬೇಕಿದ್ದು, ಇದಕ್ಕೆ ಅನುದಾನ ಪುರತತ್ವ ಇಲಾಖೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ದೇವಸ್ಥಾನದಿಂದ ಅನುದಾನ ಪಡೆದು ಕಾಮಗಾರಿ ನಡೆಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಭಾರತ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರ ವಿಶೇಷಾಧಿಕಾರಿ ಬಿ ಎನ್ ಕೃಷ್ಣಯ್ಯ, ಪುರಾತತ್ವ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಶ್ರೀ ರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ಶ್ರೀ ನಿಮಿಷಾಂಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ,ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಪುರತತ್ವ ಸಂರಕ್ಷಣಾ ಸಹಾಯಕ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.