Mysore
22
overcast clouds

Social Media

ಭಾನುವಾರ, 05 ಜುಲೈ 2026
Light
Dark

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಜನಪರ ಉತ್ಸವ

ಕೆ.ಆರ್.ವೃತ್ತದಿಂದ ಮಹಾರಾಣಿ ಕಾಲೇಜುವರೆಗೆ ಮೆರವಣಿಗೆ; ಡೊಳ್ಳು, ತಮಟೆ ಸದ್ದಿಗೆ ಕುಣಿದು ಸಂಭ್ರಮಿಸಿದ ವಿದ್ಯಾರ್ಥಿನಿಯರು

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪರ ಉತ್ಸವ ಕಾಲೇಜಿನ ಆವರಣದಲ್ಲಿ ಹಬ್ಬದ ಸಂಭ್ರಮವನ್ನು ಉಂಟುಮಾಡಿತ್ತು. ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿನಿಯರು ಡೊಳ್ಳು, ತಮಟೆ ಸದ್ದಿಗೆ ಕುಣಿದು ಸಂಭ್ರಮಿಸಿದರು. ಬಳಿಕ ಜಾನಪದ ಕಾವ್ಯ ಗಾಯನ ಅಸ್ವಾದಿಸಿದರು.

ಜನಪರ ಉತ್ಸವದ ಅಂಗವಾಗಿ ಹತ್ತಾರು ಕಲಾ ತಂಡಗಳೊಂದಿಗೆ ಕೆ.ಆರ್.ವೃತ್ತದಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಪಟ ಕುಣಿತ, ಕಂಸಾಳೆ, ರಂಗ ಕುಣಿತ, ಕೋಲಾಟ, ಪೂಜಾ ಕುಣಿತ ತಂಡಗಳು ಪಾಲ್ಗೊಂಡಿದ್ದವು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರರ ಜೀವನ ವೃತ್ತಾಂತವನ್ನು ಜಾನಪದ ಗಾಯಕ ಡಾ.ಮಳವಳ್ಳಿ ಮಹದೇಸ್ವಾಮಿ ತಂಡದವರು ಹಾಗೂ ಡಾ.ಮೈಸೂರು ಗುರುರಾಜ್ ತಂಡದವರು ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಕಾವ್ಯ ಗಾಯನ ಪ್ರಸ್ತುಪಡಿಸಿದರು. ಬನ್ನೂರಿನ ದೊಡ್ಡ ರಾಚಪ್ಪ ಮತ್ತು ತಂಡ ತಂಬೂರಿ ಪದ, ನಂಜನಗೂಡು ತಾಲ್ಲೂಕಿನ ಕೆ.ಎನ್.ಅಶ್ವಿನಿ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ತಲಕಾಡಿನ ಪುಟ್ಟಮಾದಮ್ಮ, ಮಾದಿಗಳ್ಳಿಯ ಚೆನ್ನ್ನಾಜಮ್ಮ ಮತ್ತು ತಂಡದವರು ಸೋಬಾನೆ ಪದ ಹಾಡಿದರು.
ಬನ್ನೂರಿನ ಕರಿಯಪ್ಪ ತಂಡದ ಪೂಜಾ ಕುಣಿತಕ್ಕೆ ನೆರೆದಿದ್ದ ವಿದ್ಯಾರ್ಥಿನಿಯರು ಕುಣಿದು ಸಂಭ್ರಮಿಸಿದರು. ಮಹಿಳಾ ಕಂಸಾಳೆ, ರಂಗ ಕುಣಿತ ವಿದ್ಯಾರ್ಥಿನಿಯರನ್ನು ರಂಜಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಾಡಿನ ಪ್ರಗತಿ ಹಣ, ಸಂಪತ್ತನ್ನು ಮಾತ್ರ ಅವಲಂಬಿಸಿರುವುದಿಲ್ಲ. ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಶ್ರೀಮಂತಿಕೆಯನ್ನು ಒಳಗೊಂಡಿರುತ್ತದೆ. ಕಲೆ, ಸಂಸ್ಕೃತಿಯಿಂದ ರಾರಾಜಿಸುವ ಸಮಾಜವು ಸದಾ ಆರೋಗ್ಯ ಪೂರ್ಣವಾಗಿರುತ್ತದೆ. ಗ್ರಾಮೀಣ ಭಾಗದ ಜನರು ಅಕ್ಷರ ಕಲಿಯದಿದ್ದರೂ ಕಲಾವಿದರಾಗಿದ್ದರು ಎಂದು ಹೇಳಿದರು.

ಪ್ರಸ್ತುತ ಶಿಕ್ಷಣ ಸೀಮಿತವಾಗುತ್ತಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯ ಬದಲು ರ್ಯಾಂಕ್‌ಗೆ ಸೀಮಿತಗೊಳಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಪಠ್ಯದ ಹೊರಗೂ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯ, ಓದು, ಅಂಕಗಳಿಕೆಗೆ ಸೀಮಿತವಾಗಬಾರದು. ವೇದಿಕೆ ಸಿಕ್ಕಾಗ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮಾತನಾಡಿ, ಡಿಜೆ ಸಂಸ್ಕೃತಿ ಹೆಚ್ಚಾಗಿ ಜಾನಪದ ಗಾಯನ, ನೃತ್ಯ ಪ್ರಕಾರಗಳಿಗೆ ಹಿನ್ನೆಡೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಲೆ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕಲಾವಿದರನ್ನು ಪ್ರೋತ್ಸಾಹಿಸಲು ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಡಾ.ಆರ್.ಜಯರಾಮು, ಡಾ.ಬಿ.ಸವಿತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರಿಯಾಂಕಾ, ಕಾರ್ಯದರ್ಶಿ ಜೈಬಾ ಮುಂತಾದವರು ಭಾಗವಹಿಸಿದ್ದರು.


ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎನ್ನಲಾಗುತ್ತಿದೆ. ಇದು ಪುರುಷ ಪ್ರಧಾನ ಧೋರಣೆಯೇ ಆಗಿದೆ. ಮುಂದಿನ ದಿನಗಳಲ್ಲಿ ಪುರುಷನ ಜತೆ ಮಹಿಳೆ ಇದ್ದಾಳೆ ಎಂದಾಗಬೇಕು. ಅವಕಾಶ ಸಿಕ್ಕರೆ ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ.

-ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!