Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಡಿಕೇರಿ : ಶಬ್ಧ ಮಾಲಿನ್ಯ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ, ನೆಮ್ಮದಿ ಬದುಕು ಸಾಗಿಸಲಾಗದೆ ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಹೆಚ್ ಜಿ ಕುಟ್ಟಪ್ಪ ಎಂಬುವರು ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಚೌಡ್ಲು ಗ್ರಾಮದ ಮಂಜುನಾಥ ಅಟೋ ವರ್ಕ್ಸ್ ನಿಂದ ಕಳೆದ ಐದು ವರ್ಷಗಳಿಂದ ತಮಗೂ ತಮ್ಮ ಪತ್ನಿಗೂ ತೀವ್ರ ಮಾನಸಿಕ ಹಿಂಸೆಯಾಗಿದ್ದು ಎಲ್ಲಿಯೂ ನ್ಯಾಯ ದೊರಕಿಲ್ಲ ಎಂದು ಕುಟ್ಟಪ್ಪ ಅವರು ಆರೋಪಿಸಿದ್ದಾರೆ.

೨೦೧೧ರಲ್ಲಿ ಕೃಷಿ ಇಲಾಖೆಯಿಂದ ನಿವೃತ್ತಿಯಾದ ಬಳಿಕ ಕುಟ್ಟಪ್ಪ ಅವರು ಚೌಡ್ಲು ಗ್ರಾಮದ ತಮ್ಮ ಸ್ವಂತ ನಿವಾಸಲ್ಲಿ ನೆಲೆಸಿರುತ್ತಾರೆ. ಇದೇ ಮನೆಯ ಸಮೀಪದಲ್ಲೇ ಮಂಜುನಾಥ ಅಟೋ ವರ್ಕ್ಸ್ ಇದ್ದು ತೀವ್ರ ಶಬ್ಧ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಕುಟ್ಟಪ್ಪ ದೂರಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗ್ಯಾರೇಜ್ ಸಿಬ್ಬಂದಿ ತಮಗೆ ಜೀವ ಬೆದರಿಕೆ ಒಡ್ಡಿದ್ದು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬೆಳಗ್ಗಿನಿಂದ ತಡರಾತ್ರಿಯವರೆಗೂ ವಿಪರೀತ ಶಬ್ಧ ಮಾಡುವುದು, ವಾಹನಗಳನ್ನು ಸ್ಟಾರ್ಟ್ ಮಾಡಿ ಬೇಕೆಂದೇ ರೈಸ್ ಮಾಡುವುದು, ಗ್ಯಾರೇಜ್ ತ್ಯಾಜ್ಯಗಳಿಗೆ ಬೇಕೆಂದೇ ಮನೆಯ ಸಮೀಪ ಬೆಂಕಿ ಹಾಕಿ ಹೊಗೆ ಎಬ್ಬಿಸುವಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದರ ವಿರುದ್ಧ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಚೌಡ್ಲು ಗ್ರಾಮ ಪಂಚಾಯಿತಿ ಮತ್ತು ಆಗಿನ ಉಸ್ತುವಾರಿ ಸಚಿವರಾಗಿದ್ದ ಸಾರಾ ಮಹೇಶ್ ಅವರಿಗೆ ಲಿಖಿತ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಜುನಾಥ ಗ್ಯಾರೇಜ್, ಭೂ ಪರಿವರ್ತನೆ ಮಾಡದ ಹಿನ್ನೆಲೆಯಲ್ಲಿ ಚೌಡ್ಲು ಪಂಚಾಯಿತಿ ಗ್ಯಾರೇಜ್‌ನ ಲೈಸೆನ್ಸ್ ನವೀಕರಣಗೊಳಿಸುವುದಿಲ್ಲ. ಅಲ್ಲದೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ಸುಡುವುದರಿಂದ ವಾಯುಮಾಲಿನ್ಯ ವಾಗಿರುವುದನ್ನು ದೃಢೀಕರಿಸಿ ಗ್ರಾಮ ಪಂಚಾಯಿತಿಗೆ ವರದಿ ನೀಡಿದೆ. ಅಲ್ಲದೆ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿ ೮೫ರ ಬದಿಯಲ್ಲೇ ಗ್ಯಾರೇಜ್ ಇದ್ದು ರಸದತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡುತ್ತಿರುವ ಆರೋಪವಿದೆ.

ಈ ಎಲ್ಲಾ ಕಾರಣಗಳಿಂದಾಗಿ ಚೌಡ್ಲು ಗ್ರಾಮ ಪಂಚಾಯಿತಿ ಗ್ಯಾರೇಜ್ ಅನ್ನ ತೆರವು ಗೊಳಿಸಲು ನಿರ್ಣಯಕೈಗೊಂಡು, ಗ್ಯಾರೇಜ್‌ನ್ನ ಸ್ಥಳಾಂತರಿಸಲು ೨೦೨೧ರ ಮಾರ್ಚ್‌ನಲ್ಲಿ ಮೂರು ತಿಂಗಳು ಗಡುವು ನೀಡುತ್ತದೆ. ಈ ಗಡುವಿನ ವಿರುದ್ಧ ಗ್ಯಾರೇಜ್ ಮಾಲೀಕ ಮನೋಜ್ ಸೋಮವಾರಪೇಟೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಆದರೆ ನ್ಯಾಯಾಲಯ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದೂ ಸ್ಥಳೀಯ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸುತ್ತದೆ. ಈ ಸಂದರ್ಭ ಚೌಡ್ಲು ಪಂಚಾಯಿತಿ ಸರ್ವ ಸದಸ್ಯರು ಗ್ಯಾರೇಜ್ ತೆರವಿಗೆ ಮುಂದಾದಾಗ ಇದಕ್ಕೆ ಸೋಮವಾರಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ತಡೆಯೊಡ್ಡಿದ್ದಾರೆ ಎಂದು ಕುಟ್ಟಪ್ಪ ದಂಪತಿ ಆರೋಪಿಸಿದ್ದಾರೆ.

ಇಷ್ಟಲ್ಲಾ ಆದರೂ ತಮಗೆ ನ್ಯಾಯ ದೊರಕದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ತಮಗೆ ದಯಾಮರಣ ನೀಡುವಂತೆ ಕುಟ್ಟಪ್ಪ ದಂಪತಿ ಮನವಿ ಮಾಡಿದ್ದಾರೆ. ಜೀವನಪೂರ್ತಿ ಸರ್ಕಾರದ ಸೇವೆ ಮಾಡಿ ನಿವೃತ್ತಿ ನಂತರ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಾಗಿದೆ, ಹಾಗಾಗಿ ತಮಗೆ ದಯಾ ಮರಣ ನೀಡುವಂತೆ ಅವರು ಬೇಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ