ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಘಟನೆ; ಆರೋಪಿಗಳು ಪರಾರಿ
ಮದ್ದೂರು : ಸರ್ಕಾರದ ಆದೇಶದಂತೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಜಮೀನಿನ ಅಳತೆಗೆ ಹೋಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತುವರಿದಾರರು ಹಲ್ಲೆ ನಡೆಸಲು ವಿಫಲ ಯತ್ನ ನಡೆಸಿದ ಘಟನೆ ಪೊಲೀಸರ ಎದುರೇ ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಜಮೀನಿನ ಅಳತೆ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಬಸವೇಗೌಡ ಸ್ಥಳದಲ್ಲೇ ಕ್ರಿಮಿನಾಶಕ ಸೇವಿಸಿ ಅಸ್ವಸ್ತಗೊಂಡಿದ್ದು, ಈತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಅಳತೆ ವೇಳೆ ಅಧಿಕಾರಿಗಳೊಂದಿಗೆ ಚಕಮಕಿಗಿಳಿದ ಒತ್ತುವರಿದಾರರು, ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಾಟ, ನೂಕಾಟ ನಡೆಸಿದ್ದರಿಂದಾಗಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದೇ ವೇಳೆ ಅಧಿಕಾರಿಗಳ ಬೆಂಬಲಕ್ಕೆ ನಿಂತ ಪಕ್ಕದ ಜಮೀನಿನ ರೈತರ ಮೇಲೆ ಒತ್ತುವರಿದಾರರ ಗುಂಪು ಹಲ್ಲೆ ನಡೆಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ಹಲ್ಲೆಯಿಂದಾಗಿ ಕೆ.ಬೆಳ್ಳೂರು ಗ್ರಾಮದ ಬಿ.ಎಸ್. ಸುನಿಲ್‌ಕುಮಾರ್ (35), ಬಿ.ಕೆ. ಕೆಂಪರಾಜು (40), ಪುನೀತ್ (28) ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಪೊಲೀಸರು ಕೆ.ಬೆಳ್ಳೂರು ಗ್ರಾಮದ ಪಿ.ಕೆಂಪೇಗೌಡ, ಪುಟ್ಟಸ್ವಾಮಿ, ಮಹದೇವು, ರಾಜಣ್ಣ, ಬಿ.ಆರ್. ಮನು, ಕೆಂಪರಾಜು, ಬಸವೇಗೌಡ, ಕವಿತಾ, ರತ್ನಮ್ಮ, ಮೋಟೇಗೌಡ, ಮೂರ್ತಿ, ಸುರೇಶ, ಚಿಕ್ಕೆದೇಗೌಡ ಹಾಗೂ ಸರೋಜಮ್ಮ ಎಂಬವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಉ ಹುಲಿಕೆರೆ ಗ್ರಾಮದ ಸರ್ವೆ ನಂ. 107ರಲ್ಲಿರುವ 9 ಗುಂಟೆ ಬೀಳು ಜಮೀನನ್ನು ಗ್ರಾಮ ಪಂಚಾಯಿತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಾಣ ಮಾಡಲು ಸರ್ಕಾರ ಮಂಜೂರು ಮಾಡಿತ್ತು. ಜಮೀನು ಅಳತೆ ಮಾಡಿ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸಿಲ್ದಾರ್ ಆದೇಶ ಹೊರಡಿಸಿದ್ದರು. ಆದೇಶದನ್ವಯ ರಾಜಸ್ವ ನಿರೀಕ್ಷಕ ಎಂ. ಜಯರಾಂ, ಸರ್ವೆಯರ್ ಶ್ರೀಕಂಠಪ್ಪ ಹಾಗೂ ಕೆ. ಬೆಳ್ಳೂರು ಪಿಡಿಓ ಮಹಮ್ಮದ್ ರಸೂಲ್ ಪೊಲೀಸರ ಬಿಗಿ ಭದ್ರತೆಯಲ್ಲಿ ಮಂಗಳವಾರ ಜಮೀನು ಅಳತೆ ಮಾಡಲು ಸ್ಥಳಕ್ಕೆ ತೆರಳಿದ್ದರು.
ಅಳತೆ ಕಾರ್ಯದ ವೇಳೆ ಸ್ಥಳಕ್ಕೆ ಧಾವಿಸಿದ ಒತ್ತುವರಿದಾರ 14 ಮಂದಿ ಆರೋಪಿಗಳು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಅಧಿಕಾರಿಗಳ ಮೇಲೆ ಗುಂಪು ಹಲ್ಲೆ ನಡೆಸಲು ಯತ್ನಿಸಲಾಯಿತು ಎಂದು ಆರೋಪಿಸಲಾಗಿದೆ.