ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿಯಾಗುತ್ತಿರುವ ಹಿನ್ನೆಲೆ 15 ದಿನಗಳಲ್ಲಿ ಪಕ್ವಗೊಂಡಿರುವ ಕಬ್ಬನ್ನು ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ. ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಿನ್ನೆ (ಜ.22) ರಂದು ಚಿರತೆ ದಾಳಿಯಿಂದ 11 ವರ್ಷದ ಬಾಲಕ ಸಾವನ್ನಪ್ಪಿದ್ದನು. ಅಲ್ಲದೇ ತಾಲೂಕಿನಲ್ಲಿ ಚಿರತೆಗಳು ನಿರಂತರ ದಾಳಿಯಿಂದ ಪ್ರಾಣಹಾನಿ ಉಂಟಾಗಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಢಳಿತಕ್ಕೆ ಕೂಡಲೆ ಕೋಂಬಿಂಗ್ ನಡೆಸುವಂತೆ ಸೂಚನೆ ನೀಡಿದರು. ಕಬ್ಬಿನ ಗದ್ದೆಯಲ್ಲಿ ಚಿರತೆಗಳು ಆಶ್ರಯ ಪಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆದಿರುವ ಕಬ್ಬು ಬೆಳೆ ಕಟಾವು ಮಾಡುವ ಬಗ್ಗೆ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ, ಸುಮಾರು 200 ಎಕರೆ ಪ್ರದೇಶದಲ್ಲಿ ಪಕ್ವಗೊಂಡಿರುವ ಕಬ್ಬು ಇರುವುದಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.