ಮೈಸೂರು: ಓದಿನಲ್ಲಿ ಶ್ರದ್ಧೆ, ಪರಿಶ್ರಮ ಹಾಗೂ ಸತತ ಪ್ರಯತ್ನ ಇದ್ದರೆ ನೀವು ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಕರ್ಣಾಟಕ ಬ್ಯಾಂಕ್‌ನ ಮೈಸೂರು ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ರಮೇಶ್ ರಾವ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ನಡೆದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ನೌಕರರಿಗೆ ಸಮಾಜಸೇವೆಯನ್ನು ಮಾಡಲು ವಿಫುಲ ಅವಕಾಶವಿದೆ. ಜನ್‌ಧನ್, ಆಧಾರ್ ಮತ್ತು ಮೊಬೈಲ್ ಪರಿಣಾಮವಾಗಿ ಮನೆ-ಮನೆಗಳಿಗೆ ಬ್ಯಾಂಕ್ ವ್ಯವಸ್ಥೆ ತಲುಪಿಸಲು ಅವಕಾಶವಿದೆ. ಸಾಮಾನ್ಯ ದಿನ ಪತ್ರಿಕೆ ಓದುವ ಜೊತಗೆ ಬಿಸನೆಸ್ ಪತ್ರಿಕೆಗಳನ್ನು ಓದುವ ಹಾಗೂ ಆರ್‌ಬಿಐ ಕಾಲಕಾಲಕ್ಕೆ ಜಾರಿಗೆ ತರುವ ನೀತಿ ನಿಯಮಗಳನ್ನು ತಿಳಿದುಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿಂಗ್ ವ್ಯವಸ್ಥೆ ಒಂದು ದೇಶದ ನರ ಮಂಡಲ ಇದ್ದಂತೆ. ಬ್ಯಾಂಕಿಂಗ್ ಸಾಕ್ಷರತೆ ಹೆಚ್ಚುತ್ತಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಯಾವುದೇ ಬ್ಯಾಂಕುಗಳಿಗೆ ಹೋದರು ಅದರ ಪ್ರೋಂಜನ ಪಡೆಯಬಹುದು ಉದಾ. ಕ್ರೆಡಿಟ್‌ಕಾರ್ಡ್, ವಿವಿಧ ಬಗೆಯ ಲೋನ್‌ಗಳ ವ್ಯವಸ್ಥೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಒದಗಿಸುತ್ತವೆ ಎಂದರು.
ಸಾಮಾನ್ಯ ಗುಮಾಸ್ತನಾಗಿ ಸೇರ್ಪಡೆಯಾದರೆ ಪ್ರಾಮಾಣಿಕತೆ, ಪರಿಶ್ರಮದಿಂದ ಕರ್ತವ್ಯ ನಿರ್ವಹಿಸಿದರೆ ಉನ್ನತ ಹುದ್ದೆ ಅಲಂಕರಿಸಬಹುದು, ಕರ್ಣಾಟಕ ಬ್ಯಾಂಕ್‌ನಲ್ಲಿ ಸಾಮಾನ್ಯ ಗುಮಾಸ್ತನಾಗಿ ಸೇರಿದ ನಾನು ೪ ಜಿಲ್ಲೆಗಳ ೭೫ ಶಾಖೆಗಳನ್ನು ಹೊಂದಿರುವ ರೂ. ೮೦೦೦ ಕೋಟಿ ವಹಿವಾಟು ಹೊಂದಿರುವ ವ್ಯವಸ್ಥೆಗೆ ಮುಖ್ಯಸ್ಥನಾಗಿರುವುದೇ ಸಾಕ್ಷಿ ಎಂದು ಹೇಳಿದರು.
ಮುಕ್ತ ವಿವಿ ಪ್ರಭಾರ ಕುಲಸಚಿವ ಡಾ. ಎ. ಖಾದರ್ ಪಾಷ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೋಲು ಸಹಜ. ಇದಕ್ಕೆ ಯಾರೂ ನಿರಾಶರಾಗದೇ ಮತ್ತೆ ಮತ್ತೆ ಪ್ರಯತ್ನಿಸಬೇಕು. ಇಂದು ಯುವ ಸಮೂಹವನ್ನು ಮೊಬೈಲ್ ಡಿಸ್ಟರ್ಬ್ ಮಾಡುತ್ತಿದೆ. ಹಾಗಾಗಿ ಮೊಬೈಲ್‌ನ ಅಗತ್ಯ ಎಷ್ಟು ಎಂಬ ಬಗ್ಗೆ ತಿಳಿದುಕೊಂಡು, ಅಗತ್ಯವಿದ್ದಷ್ಟು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಡಿಜಿಟಲ್ ಲೈಬ್ರರಿಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ. ಕೆ. ಬಿ. ಪ್ರವೀಣ, ಅಧ್ಯಯನ ಕೇಂದ್ರ ಡೀನ್ ಡಾ. ಎಂ. ರಾಮನಾಥಂ ನಾಯ್ಡು, ಕರ್ಣಾಟಕ ಬ್ಯಾಂಕ್‌ನ ಅಧಿಕಾರಿ ಹೆಚ್. ಬಾಲಕೃಷ್ಣ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಗಣೇಶ್ ಕೆ.ಜಿ. ಕೊಪ್ಪಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.