ಕಾಮಗೆರೆ (ಕೊಳ್ಳೇಗಾಲ ತಾಲ್ಲೂಕು): ಗುಂಡಾಲ್ ಜಲಾಶಯಕ್ಕೆ ಸೇರಿದ ಪ್ರದೇಶದಲ್ಲಿ ಎರಡು ಕಾಡಾನೆಗಳು ನುಗ್ಗಿ ಜನರಲ್ಲಿ ಆತಂಕ ಸೃಷ್ಟಿಸಿವೆ.
ಒಂದು ಗಂಡು ಹಾಗೂ ಒಂದು ಹೆಣ್ಣು ಆನೆ ಎರಡು ದಿನದಿಂದ ಈ ಭಾಗದಲ್ಲಿ ಬೀಡು ಬಿಟ್ಟು ಹಲವಾರು ಜಮೀನುಗಳಲ್ಲಿ ಬೆಳೆ ನಾಶ ಮಾಡಿವೆ. ಕಣ್ಣೂರು ಗ್ರಾಮದಲ್ಲಿ ಮೊದಲು ಕಾಣಿಸಿಕೊಂಡ ಆನೆಗಳು ಆನಂತರ 4 ಮತ್ತೀಪುರ ಮಹದೇವಪ್ಪ ಅವರ ಜಮೀನಿಗೆ ನುಗ್ಗಿ ಮೆಕ್ಕೆ ಜೋಳ ಬೆಳೆ ನಾಶ ಮಾಡಿವೆ. ಮರಳು ಸೋಗೆ ಬಳಿಯೂ ಆನೆಗಳು ಇದ್ದುದನ್ನು ಜನ ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಆಹಾರ ಹುಡುಕಿ ಬಂದಿರುವ ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ.
ಈ ಕುರಿತು ಆಂದೋಲನದ ಜತೆ ಮಾತನಾಡಿದ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್‌ಕುಮಾರ್, ನಿನ್ನೆಯೇ ಒಂದು ಆನೆ ಇರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದೇವೆ. ಈ ಪ್ರದೇಶದ ಕೆಲ ಭಾಗ ಬಿಆರ್‌ಟಿಗೆ ಬರಲಿದೆ. ನಮ್ಮ ಭಾಗದಲ್ಲಿ ಬುಧವಾರ ಆನೆಗಳನ್ನು ಕಾಡಿಗೆ ಅಟ್ಟುತ್ತೇವೆ ಎಂದು ತಿಳಿಸಿದರು.