ಸುಂಟಿಕೊಪ್ಪ : ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ಮುಂಜಾನೆ ೫.೩೦ರ ಸಂದರ್ಭದಲ್ಲಿ ಒಂಟಿ ಸಲಗವೊಂದು ತೋಟದಿಂದ ಹೆದ್ದಾರಿಗಿಳಿದು ದಾಳಿಗೆ ಯತ್ನಿಸಿದ್ದು, ಕೂದಲೆಳೆ ಅಂತರದಿಂದ ಆಟೋ ಚಾಲಕ ಹಾಗೂ ಪ್ರಯಾಣಿಕರು ಪಾರಾಗಿರುವ ಘಟನೆ ವರದಿಯಾಗಿದೆ.
ಬೆಳಿಗ್ಗೆ ೫.೩೦ರಲ್ಲಿ ಗದ್ದೆಹಳ್ಳದ ಗಿರಿಯಪ್ಪಮನೆ ನಿವಾಸಿ ಅಲಿ ಎಂಬವರು ತನ್ನ ಆಟೋ ರಿಕ್ಷಾದಲ್ಲಿ ಕೇರಳಕ್ಕೆ ತೆರಳುವ ಪ್ರಯಾಣಿಕರನ್ನು ಚೆಟ್ಟಹಳ್ಳಿಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊನ್ನತ್‌ಮೊಟ್ಟೆ ಬಳಿಯಲ್ಲಿ ಏಕಾಏಕಿ ತೋಟದಿಂದ ಒಂಟಿ ಸಲಗವೊಂದು ರಸ್ತೆಗಿಳಿದು ಆಟೋ ರಿಕ್ಷಾವನ್ನು ಕಂಡು ಬೆನ್ನಟ್ಟಿದೆ. ಚಾಲಕನ ಸಮಯ ಪ್ರಜ್ಞೆಯಿಂದ ವಾಹನವನ್ನು ಅತಿ ವೇಗವಾಗಿ ಚಲಾಯಿಸುವ ಮೂಲಕ ತಾನು ಹಾಗೂ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.
ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸಿ ವಾಹನಗಳ ಮೇಲೆ ದಾಳಿ ನಡೆಸಿರುವ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಇದರಿಂದ ಈ ಭಾಗದ ನಿವಾಸಿಗಳು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಸಂಬಂಧಿಸಿದ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




