ಮಡಿಕೇರಿ: ಕೊಡಗು ಜಿಲ್ಲೆಯ ದುಬಾರೆ ಹಾಗೂ ಬರಪೊಳೆಯಲ್ಲಿ ಜಲಕ್ರೀಡೆ ನಡೆಸುವ ಮಾಲೀಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್‌ನೆಸ್ ಪ್ರಮಾಣ ಪತ್ರ ಪಡೆದು ಅನುಮತಿ ಪಡೆಯಬೇಕು ಎಂದು ನಿರ್ಧರಿಸಲಾಗಿದೆ.
ಈ ಕುರಿತು ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಹಾರಂಗಿ ಜಲಾಶಯದ ಬಳಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಮಂತರ್ ಗೌಡ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ರಿವರ್ ರ್ಯಾಪ್ಟಿಂಗ್ ಸ್ಥಳದ ಟಿಕೆಟ್ ಕೌಂಟರ್ ಪ್ರದೇಶದಲ್ಲಿ ಸೆಲ್ಟರ್ ಅಳವಡಿಕೆ, ಪ್ರವಾಸಿಗರ ಸುರಕ್ಷತೆಗೆ ಸೋಪಾನ್ ಕಟ್ಟೆ ರೈಲಿಂಗ್ಸ್ ಅಳವಡಿಕೆ, ಗೈಡ್‌ಗಳ ಬಟ್ಟೆ ಬದಲಿಸುವ ಕೊಠಡಿ, ಬೆಂಚ್‌ಗಳ ಅಳವಡಿಕೆ, ಕುಡಿಯುವ ನೀರು, ಮಾಹಿತಿ ಫಲಕ, ಶೌಚಾಲಯ ನಿರ್ಮಾಣದ ಜೊತೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ರಿವರ್ ರ್ಯಾಪ್ಟಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂದರ್ಭದಲ್ಲಿ ಏನಾದರೂ ತೊಂದರೆ ಆದರೆ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದು ಶಾಸಕ ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ ನೀಡಿದರು.