ಮಡಿಕೇರಿ : ಮಲ್ಪೆ ಸಮುದ್ರ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಬಾಲಕಿಯರು ನೀರುಪಾಲಾಗಿ ಓರ್ವ ಬಾಲಕಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಮಡಿಕೇರಿ ನಿವಾಸಿ ಮಾನ್ಯ(16) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಗೆಳತಿ ಯಶಸ್ವಿನಿಯನ್ನು (16) ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಶಸ್ವಿನಿ ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂಬಿ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್ ನೀಡಿದ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಇಬ್ಬರು ನಾಪತ್ತೆಯಾದ ಬಗ್ಗೆ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು. ಆದರೆ ಇವರಿಬ್ಬರೂ ಮನೆ ಬಿಟ್ಟು ಮಂಗಳೂರು ಕಡೆಗೆ ಹೊರಟವರು ಪಣಂಬೂರು ಬೀಚ್ ನಲ್ಲಿ ಆಟವಾಡಿ ಬಳಿಕ ಬಸ್ ಹತ್ತಿಕೊಂಡು ಮುಸ್ಸಂಜೆ ವೇಳೆ ಮಲ್ಪೆ ಬೀಚಿಗೆ ಬಂದಿದ್ದಾರೆ.
ರಾತ್ರಿ ವೇಳೆ ಮಲ್ಪೆ ಬೀಚಿನಲ್ಲಿ ಆಟ ಆಡುತ್ತಿದ್ದ ವೇಳೆ ಅಬ್ಬರದ ಅಲೆಗಳಿಗೆ ಸಿಲುಕಿ ಇವರಿಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆ ಎನ್ನಲಾಗಿದೆ. ಇವರನ್ನು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ರಕ್ಷಿಸಿ ತೀರಕ್ಕೆ ತಂದಿದ್ದಾರೆ. ಈ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಾನ್ಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಳು ಎಂದು ತಿಳಿದುಬಂದಿದೆ.





