ಮಡಿಕೇರಿ: ಗೋವುಗಳನ್ನು ಸಾಕಣೆ ಮಾಡಲೆಂದು ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇನ್ನೂರು ತಳಿಪರಂಬಾ ನಿವಾಸಿ ಸಾಧಿಕ್ ಹಾಗೂ ಅಬ್ದುಲ್ ಅಹಮ್ಮದ್ ತಂಜಲ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ತಳಿಪರಂಬಾದಿಂದ ಬಂದು ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧೆಡೆ ದನ ಕರುಗಳನ್ನು ಖರೀದಿಸಿ ನಡುರಾತ್ರಿ ಸಾಗಿಸುತ್ತಿದ್ದರು. ರಾಸುಗಳನ್ನು ತುಂಬಿಸಿಕೊಂಡು ಅನುಮಾನ ಬರದಂತೆ ಆಲೂಗೆಡ್ಡೆ ಮೂಟೆಗಳನ್ನು ತುಂಬಿಸಿದ್ದರು.
ಲಾರಿ ಹೊರಡುತ್ತಿದ್ದ ವಿಷಯ ತಿಳಿದ ಗೋರಕ್ಷಕರು ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿ ಪರಿಶೀಲಿಸಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ಗೋವುಗಳು ಪತ್ತೆಯಾಗಿವೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.





