ಗೋಣಿಕೊಪ್ಪ : ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಸ್ಥಳೀಯರು ಮತ್ತಷ್ಟು ಅನಾಹುತ ತಪ್ಪಿಸಲು ಬೀದಿ ಶ್ವಾನವನ್ನು ಹೊಡೆದು ಸಾಯಿಸಿದ್ದಾರೆ.
ಯುವನಿಕಾ(13), ವಿ.ಆರ್.ಗ್ರಹಿತ (10), ಶ್ರೀನಿವಾಸ್ (45), ತಜವೀಯ (25) ಗಾಯಗೊಂಡವರು. ಶನಿವಾರ ಬೆಳಿಗ್ಗೆ 8.50ರ ಸಮಯದಲ್ಲಿ ಮೈಸೂರಮ್ಮ ನಗರದಿಂದ ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿ ಶಾಲೆಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಇನ್ನಿಬ್ಬರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಪರಿಣಾಮ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಇದನ್ನು ಓದಿ: ಕನ್ನಡ ನಾಡು ನುಡಿ ನಮ್ಮ ಹೆಮ್ಮೆ : ಹಾಡಿ ಹೊಗಳಿದ ಪ್ರಧಾನಿ ಮೋದಿ
ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ಡಾ.ಗ್ರೀಷ್ಮ ಬೋಜಮ್ಮ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಮತ್ತು ಜನರ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಯಿಂದ ಮತ್ತಷ್ಟು ಸಂಭವಿಸಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕರು ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.
ಗೋಣಿಕೊಪ್ಪದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು,ರಸ್ತೆಯಲ್ಲಿ ತೆರಳಲು ಭಯಪಡುವಂತಾಗಿದೆ. ಸಣ್ಣ ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುತ್ತಿವೆ. ಕೈಯಲ್ಲಿ ವಸ್ತುಗಳನ್ನು ಹಿಡಿದು ನಡೆದು ಹೋಗುತ್ತಿರುವಾಗ ದಾಳಿಗೆ ಮುಂದಾಗುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.





